ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಅಲ್ಪಸಂಖ್ಯಾತರಿಗೆ 4 ರಿಂದ 5 ಸಾವಿರ ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಮೀಸಲಿಡುವುದಾಗಿ ಸಿಎಂ ಅವರ ಹೇಳಿಕೆಯನ್ನು ಬಿಜೆಪಿ ಓಲೈಕೆ ರಾಜಕಾರಣ ಎಂದು ಕರೆದಿರುವ ಬಗ್ಗೆ ಬೆಳಗಾವಿಯ ಸುವರ್ಣಸೌಧದ ಬಳಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದರು.
ನನ್ನ ಮಾತಿನಲ್ಲಿ ತಪ್ಪೇನಿದೆ? ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ” ಎಂದು ಹೇಳಿದರು.
ಬೊಮ್ಮಾಯಿ ಟೀಕೆ
“ಮುಖ್ಯಮಂತ್ರಿಗಳು ನಿನ್ನೆ ಸಭೆಯೊಂದರಲ್ಲಿ ರಾಷ್ಟ್ರ ಸಂಪತ್ತಿನಲ್ಲಿ ಅಲ್ಪ ಸಂಖ್ಯಾತರಿಗೆ ವಿಶೇಷವಾಗಿರುವ ಹಕ್ಕು ಕೊಡುವ ಮಾತನಾಡಿದ್ದಾರೆ. ಇದು ತುಷ್ಟೀಕರಣದ ರಾಜಕಾರಣ ಮತ ಬ್ಯಾಂಕಿನ ರಾಜಕಾರಣ ಮತ್ತು ಮುಖ್ಯಮಂತ್ರಿ ಯಾಗಿ ಎಲ್ಲರಿಗೂ ನ್ಯಾಯ ಕೊಡುವ ಅವರ ಕರ್ತವ್ಯವನ್ನು ಮರೆತಂತಿದೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ಈಗಾಗಲೇ ಅಲ್ಪಸಂಖ್ಯಾತರಿಗೆ ವಕ್ಪ್ ಬೊರ್ಡ್ ಮೈನಾರಿಟಿ ಕಾರ್ಪೊರೆಷನ್, ಮೈನಾರಿಟಿ ಕಮಿಷನ್ ನಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಅನುದಾನ ಬರುತ್ತಿದೆ ಅವರೂ ಕೂಡ ಶಿಕ್ಷಣವನ್ನು ಪಡೆದು ಸ್ವಾವಲಂಬಿ ಆಗಬೇಕೆಂಬ ಆಸೆ ಎಲ್ಲ ಸರ್ಕಾರಗಳ ಉದ್ದೇಶ. ಆದರೆ, ಇತರ ಎಲ್ಲ ಸಮುದಾಯಗಳ ಮೇಲೆ ಸವಾರಿ ಮಾಡುವ ರೀತಿ ಮುಖ್ಯಮಂತ್ರಿಯ ಮಾತು ಖಂಡನೀಯ” ಎಂದು ಹೇಳಿದ್ದಾರೆ.