ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ನಡೆಸಿ, ಕೊನೆಗೆ ಬಿಜೆಪಿಯಿಂದ ಟಿಕೆಟ್ ವಂಚಿರಾಗಿರುವ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ನಾಯಕ ಜೆ ಸಿ ಮಾಧುಸ್ವಾಮಿ ಪಕ್ಷ ತೊರೆಯಲು ನಿರ್ಧರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ವಿಧಾನಸಭೆ ಸೋಲಿನ ನಂತರ ಲೋಕಸಭೆಗೆ ಸ್ಪರ್ಧಿಸಲು ಸಜ್ಜಾಗಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಟಿಕೆಟ್ ಕೊಡಿಸುತ್ತಾರೆ ಎಂದು ನಂಬಿದ್ದರು. ಕೊನೆಗೆ
ಮಾಜಿ ಸಚಿವ ವಿ.ಸೋಮಣ್ಣಗೆ ಟಿಕೆಟ್ ಸಿಗುತ್ತಿದ್ದಂತೆ ತೀವ್ರ ಅಸಮಾಧಾನ ಹೊರಹಾಕಿದ್ದರು.
ಜಿಲ್ಲೆಯವರನ್ನು ಬಿಟ್ಟು ಹೊರಗಿನವರಿಗೆ ಅವಕಾಶ ನೀಡದಂತೆ ಬಹಿರಂಗವಾಗಿಯೇ ಬಿಜೆಪಿ ವರಿಷ್ಠರನ್ನು ಆಗ್ರಹಿಸಿದ್ದರು. ಮಾಧುಸ್ವಾಮಿಯ ಮನವೊಲಿಸಲು ಸೋಮಣ್ಣ ಮುಂದಾಗುತ್ತಿದ್ದಂತೆ, “ಸೋಮಣ್ಣ, ತಮ್ಮ ಮನೆಗೆ ಬರುವುದು ಬೇಡ” ಎಂದು ಕಡ್ಡಿ ಮುರಿದಂತೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಮಾಧುಸ್ವಾಮಿಗೆ ಆಹ್ವಾನ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಾಧುಸ್ವಾಮಿ ಅಧಿಕೃತವಾಗಿ ಕಾಂಗ್ರೆಸ್‌ಗೆ ಬಂದರೆ ನಿಯೋಜಿತ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಬದಲಾಗಿ ಅವರನ್ನೇ ಕಣಕ್ಕೆ ಇಳಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮಾಧುಸ್ವಾಮಿ ಕಾಂಗ್ರೆಸ್‌ಗೆ ಬರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬರಲಿದೆ ಎನ್ನುವ ವಿಶ್ಲೇಷಣೆ ವ್ಯಕ್ತವಾಗಿದೆ.
ಲೋಕಸಭೆಗೆ ಟಿಕೆಟ್ ಕೊಡುವುದಾದರೆ ಪಕ್ಷ ಸೇರುವುದಾಗಿ ಮಾಧುಸ್ವಾಮಿ ಷರತ್ತು ಹಾಕಿದ್ದಾರೆ ಎನ್ನಲಾಗಿದೆ. ಲೋಕಸಭೆಗೆ ಟಿಕೆಟ್ ನೀಡಲು ಸಾಧ್ಯವಾಗದಿದ್ದರೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ಕಾಂಗ್ರೆಸ್ ನೀಡಿದೆ ಎಂದು ತಿಳಿದುಬಂದಿದೆ.
ಫಲಪ್ರದ ನೀಡದ ಆರ್.ಅಶೋಕ್ ಭೇಟಿ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ ಸಿ ಪುರದಲ್ಲಿರುವ ಮಾಧುಸ್ವಾಮಿ ಮನೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತಿತರ ನಾಯಕರು ಸೋಮವಾರ ರಾತ್ರಿ ಭೇಟಿನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರ ವಿರುದ್ಧ ಮಾಧುಸ್ವಾಮಿ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. “ಇಷ್ಟೆಲ್ಲ ಆದಮೇಲೆ ನಿಮ್ಮ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಇರುವುದಿಲ್ಲ” ಎಂದು ನೇರವಾಗಿಯೇ ಅಶೋಕ್‌ಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಮಾಧುಸ್ವಾಮಿ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ನ ಸಿ ಬಿ ಸುರೇಶ್‌ಬಾಬು ವಿರುದ್ಧ ಸೋತಿದ್ದರು. ತಮ್ಮ ಸೋಲಿಗೆ ಸ್ವಪಕ್ಷದ ಮುಖಂಡರೇ ಕಾರಣ ಎನ್ನುವ ಆರೋಪಗಳನ್ನು ಮಾಧುಸ್ವಾಮಿ ಮಾಡಿದ್ದರು. 2018ರಲ್ಲಿ ಇದೇ ಕ್ಷೇತ್ರದಿಂದ ಸುರೇಶ್ ಬಾಬು ಅವರನ್ನು ಮಾಧುಸ್ವಾಮಿ ಸೋಲಿಸಿದ್ದರು.
ಚಿಕ್ಕನಾಯಕನಹಳ್ಳಿಯಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಧುಸ್ವಾಮಿ ಈ ಹಿಂದೆ ಜನತಾ ದಳದಲ್ಲಿದ್ದವರು. ಬಿ ಎಸ್ ಯಡಿಯೂರಪ್ಪ ಅವರ ಕೆಜೆಪಿ ಸೇರಿ ನಂತರ ಬಿಜೆಪಿ ಪಾಳಯಕ್ಕೆ ತೆರಳಿದ್ದರು. ಅವರು 2023ರ ವಿಧಾನಸಭೆ ಚುನಾವಣೆ ಸೋಲಿನ ನಂತರ ಬಿಜೆಪಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು.