ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶವ್ಯಾಪಿ ‘ನಾರಿ ನ್ಯಾಯ ಗ್ಯಾರಂಟಿ’ ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕವಾಗಿ ₹1 ಲಕ್ಷ ಆರ್ಥಿಕ ಸಹಾಯ ಸೇರಿ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ.
ನವದೆಹಲಿಯಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರದ ಧುಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ನ್ಯಾಯ್ ಯಾತ್ರೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ‘ನಾರಿ ನ್ಯಾಯ ಗ್ಯಾರಂಟಿ’ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಐದು ಭರವಸೆ ನೀಡಿದ್ದು, ‘ಮಹಾಲಕ್ಷ್ಮಿ’, ‘ಆದಿ ಅಬಾದಿ-ಪುರ ಹಕ್’, ‘ಶಕ್ತಿ ಕಾ ಸಮ್ಮಾನ್’, ‘ಅಧಿಕಾರ ಮೈತ್ರಿ’ ಮತ್ತು ‘ಸಾವಿತ್ರಿಬಾಯಿ ಫುಲೆ ಹಾಸ್ಟೆಲ್’ಗಳನ್ನು ನಿರ್ಮಾಣ ಮಾಡುವುದಾಗಿ ಕಾಂಗ್ರೆಸ್ ತಿಳಿಸಿದೆ.
ಮಹಿಳಾ ಮೇಳ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಕಳೆದ 10 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರವಧಿಯಲ್ಲಿ ಮಹಿಳೆಯರಿಗೆ ಏನೂ ಸಿಕ್ಕಿಲ್ಲ. ಬೆಲೆ ಏರಿಕೆ, ನಿರುದ್ಯೋಗದಿಂದಾಗಿ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸಿದ್ದಾರೆ” ಎಂದು ಕಿಡಿಕಾರಿದರು.
“ಮಹಾಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ ಆರ್ಥಿಕ ಸಹಾಯ, ಆದಿ ಆಬಾದಿ-ಪುರ ಹಕ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಲ್ಲಿ ಮಹಿಳೆಯರು ಶೇ 50ರಷ್ಟು ಮೀಸಲಾತಿ ನೀಡಲಾಗುವುದು” ಎಂದು ರಾಹುಲ್ ತಿಳಿಸಿದರು.
“ಶಕ್ತಿ ಕಾ ಸಮ್ಮಾನ್ ಅಡಿಯಲ್ಲಿ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು. ‘ಅಧಿಕಾರ ಮೈತ್ರಿ’ ಅಡಿಯಲ್ಲಿ ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅಗತ್ಯ ಸಹಾಯವನ್ನು ಒದಗಿಸಲು ಪ್ರತಿ ಪಂಚಾಯತಿಯಲ್ಲಿ ಒಬ್ಬ ಕಾನೂನು ಸಹಾಯಕರನ್ನು ಅಧಿಕಾರ ಮೈತ್ರಿ ರೂಪದಲ್ಲಿ ನೇಮಿಸಲಾಗುತ್ತದೆ” ಎಂದು ಭರವಸೆ ನೀಡಿದ್ದಾರೆ.
“ಕೇಂದ್ರವು ದೇಶದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕನಿಷ್ಠ ಒಂದು ಉದ್ಯೋಗಿ ಮಹಿಳಾ ಹಾಸ್ಟೆಲ್ ಅನ್ನು ರಚಿಸುತ್ತದೆ ಮತ್ತು ಈ ಹಾಸ್ಟೆಲ್‌ಗಳ ಸಂಖ್ಯೆಯನ್ನು ದೇಶದಾದ್ಯಂತ ದ್ವಿಗುಣಗೊಳಿಸಲಾಗುವುದು” ಎಂದು ರಾಹುಲ್ ಅಶ್ವಾಸನೆ ಕೊಟ್ಟಿದ್ದಾರೆ.