ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ಅವರು ಸುದ್ದಿಗಾರರ ಜೊತೆ ಮಾತನಾಡಿ, “ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿ ಬರುತ್ತಿದೆ. ಯಾವ ಉದ್ದೇಶದಿಂದ ನನ್ನ ಹೆಸರು ಕೇಳಿ ಬರುತ್ತಿದೆ ಎಂಬುದು ಗೊತ್ತಿಲ್ಲ” ಎಂದರು.
ಮುಂಬರುವ ಲೋಕಸಭೆ ಚುನಾವಣೆಗೆ ಬೆಳಗಾವಿಯಿಂದ ಸ್ಪರ್ಧಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಬಿಜೆಪಿ ಸೇರ್ಪಡೆಯಾದ ಬಳಿಕ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಶೆಟ್ಟರ್ ಅವರ ದೆಹಲಿ ಹೇಳಿಕೆ ಕುತೂಹಲ ಮೂಡಿಸಿದೆ.
ಬೆಳಗಾವಿಯಲ್ಲಿ ಬದಲಾಗಿದ್ದ ರಾಜಕೀಯ ಲೆಕ್ಕಾಚಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಮಂಗಳಾ ಅಂಗಡಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.
ಆದರೆ, ಶೆಟ್ಟರ್ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಲೆಕ್ಕಾಚಾರಗಳು ಬದಲಾಗಿದ್ದವು. ಶೆಟ್ಟರ್, ಅಂಗಡಿ ಇಬ್ಬರೂ ಬೀಗರಾಗಿರುವ ಹಿನ್ನೆಲೆ ಅವರಿಗೆ ರಾಜಕೀಯ ಲಾಭ ದೊರೆಯುವ ಮಾತುಗಳು ಮುನ್ನೆಲೆಗೆ ಬಂದಿದ್ದವು.
ಶನಿವಾರ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ದೆಹಲಿಯಲ್ಲಿ ಆರಂಭವಾಗಿದೆ. ದೆಹಲಿಯ ಭಾರತ್ ಮಂಟಪದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.
ಜಗದೀಶ್ ಶೆಟ್ಟರ್ ಅವರೇ ಬೆಳಗಾವಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರಾ ಅಥವಾ ಹಾವೇರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಂಬ ಊಹಾಪೋಹಗಳಿಗೆ ಸದ್ಯದಲ್ಲೇ ತೆರೆ ಬೀಳಲಿದೆ.