Homeಅಭಿಮನ್ಯುCover Story | ಕುಸಿತದತ್ತ ಮೋದಿ ಬಲ; ಅದುರಾಡುತ್ತಿದೆ ಬಿಜೆಪಿ ಪದತಲ

Cover Story | ಕುಸಿತದತ್ತ ಮೋದಿ ಬಲ; ಅದುರಾಡುತ್ತಿದೆ ಬಿಜೆಪಿ ಪದತಲ

ಪ್ರಧಾನಿ ಮೋದಿ ಸುತ್ತ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ ಮೋದಿಯವರು ನಿಂತ ನೆಲೆ ಅದುರಲಾರಂಭಿಸಿದೆ; ಬಿಜೆಪಿಯ ಪದತಲ ಕುಸಿಯಲಾರಂಭಿಸಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತಾ ಹೋಗುತ್ತವೆ. ಎದುರಾಳಿಯನ್ನು ಮಣಿಸಿ, ಹೊಸಕಿ, ನಾನಾ ತಂತ್ರಗಳನ್ನು ಹೂಡಿ ಚುನಾವಣೆಯಲ್ಲಿ ಗೆಲ್ಲುವ ತವಕ ಮಾತ್ರ ಬಿಜೆಪಿಯವರಲ್ಲಿ ಕಾಣಿಸುತ್ತಿದೆ. ನೆಲ ಅದುರುತ್ತಿದ್ದರೂ ನಕ್ಷತ್ರ ಹಿಡಿದುಕೊಂಡು ನೇತಾಡುವ ಪರಿಸ್ಥಿತಿಯಲ್ಲಿ ಬಿಜೆಪಿ ಬಿದ್ದಿರುವುದು ಗೋಚರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಬಹುಮತಪಡೆದು ಅಧಿಕಾರ ಹಿಡಿಯತ್ತದೆ ಎಂದು ಯಾರಾದರೂ ನಂಬಲು ಸಾಧ್ಯವೇ?

ರಾಜಕಾರಣವೇ ಇರಲಿ, ಸಮಾಜದ ಸ್ಥಿತಿಗತಿ ಇರಲಿ, ಅಧಿಕಾರವೇ ಇರಲಿ…. ಕಾಲಚಕ್ರದೊಳಗೆ ಒಮ್ಮೆ ತಳದಲ್ಲಿದ್ದವರು ಮೇಲೆ ಹೋಗಲೇಬೇಕು, ಮೇಲೆ ಹೋದವರೊಮ್ಮೆ ನಿಧಾನಕ್ಕಾದರೂ ಕೆಳಗಿಳಿಯಲೇ ಬೇಕು. ಇದು ಪ್ರಕೃತಿ ನಿಯಮ; ಅದಕ್ಕೆ ಕಾಲಕೂಡಿ ಬರಬೇಕಷ್ಟೆ. 70ರ ದಶಕದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಡೀ ಭಾರತವನ್ನೇ ತನ್ನ ಕಪಿಮುಷ್ಟಿಯಲ್ಲಿ ಅಮುಕ ಹೊರಟವರು ಏನಾದರೂ ಎಂಬುದು ಇತಿಹಾಸದಲ್ಲಿ ದಾಖಲಾಗಿ ಹೋಗಿದೆ.

ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರ್ ವಾಜಪೇಯಿ ಅವರಿಂದ ದುರ್ಗಾಮಾತೆ ಎಂದು ಕರೆಯಿಸಿಕೊಂಡಿದ್ದ ಇಂದಿರಾಗಾಂಧಿ ಅವರೇ ಉತ್ತರದಲ್ಲಿ ಸೋಲುವ ಭೀತಿಯಿಂದ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಿಂದ ಸ್ಪರ್ಧಿಸಬೇಕಾಯಿತು. ಕೊನೆಗೆ ಅಧಿಕಾರವನ್ನೂ ಕಳೆದುಕೊಂಡು, ಮುಖಭಂಗ ಅನುಭವಿಸಬೇಕಾಯಿತು. ಹೀಗೆ, ತಿರುಗುಚಕ್ರದಲ್ಲಿ ಮೇಲೆಯೇ ಉಳಿದವರು ಬಹಳಿಲ್ಲ.

‘ಮರೆತೇನಂದರ ಮರೆಯಲಿ ಹೆಂಗಾ ಮಾವೋತ್ಸೇತುಂಗಾ…ಈ ಜಗವ ಬದಲಿಸಲು ಹೊಸ ಸೂರ್ಯನ ತರುತೆನೆಂದಿದ್ದಿ…’ ಎಂದು ಕವಿ ಚಂದ್ರಶೇಖರ ಕಂಬಾರರು ಹಾಡಿದ್ದುಂಟು. ‘ನಮ್ಮ ಸರ್ಕಾರ ಬಂದಾಗ ಬಂದೂಕಿನ ನಳಿಗೆಯಲ್ಲಿ ಗುಬ್ಬಿ ಗೂಡು ಕಟ್ಟುತ್ತದೆ…’ ಎಂದು ಕವಿ ರಂಜಾನ್ ದರ್ಗಾ ಅವರು ಬರೆದಿದ್ದರು.

ಸೂರ್ಯ ಹುಟ್ಟುವ ಮೊದಲು ತಿಳಿ ಹೊಂಬೆಳಕನ್ನು ಸೂಸುತ್ತಾ ಕಿರಣಗಳು ಬರುತ್ತವೆ. ನಿಧನಿಧಾನವಾಗಿ ಸೂರ್ಯ ಬೆಳಕನ್ನು ತರುತ್ತಾನೆ. ಕಳೆದ ಎರಡು ಮೂರು ತಿಂಗಳ ವಿದ್ಯಮಾನವನ್ನು ಗಮನಿಸಿದರೆ ಸೂರ್ಯರಶ್ಮಿಗಳು ಕಾಣಸಿಗುತ್ತವೆ. ಪರಮತ ದ್ವೇಷ, ಹಿಂಸೆ, ಕೋಮುಹಗೆಗಳ ತುಂಬಿದ, ತುಂಬುತ್ತಿರುವ ದೇಶದೊಳಗೆ ನೆಮ್ಮದಿ, ಸೌಹಾರ್ದದ, ಸಾಮರಸ್ಯದ ಬದುಕು ಹಸನಗೊಳ್ಳುವ ಸಾಧ್ಯತೆಗಳು ಅರಳುತ್ತವೆ. ಹಿಂಸೆ ಕೊನೆಗೊಳ್ಳುವ ನಾಡಿನಲ್ಲಿ ಸೈನಿಕರು, ಪೊಲೀಸರ ಬಂದೂಕಿಗೆ ಕೆಲಸವಿಲ್ಲವಾಗಿ ಆ ಬಂದೂಕಿನ ನಳಿಗೆಗಳಲ್ಲಿ ಗುಬ್ಬಿಗಳು ಗೂಡು ಕಟ್ಟುವ ಕನಸು ಕಾಣುವುದು ವಿಹಿತವೇನಲ್ಲ; ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಶಾಶ್ವತದ ಕಡೆಗೆ ಭರವಸೆಯ ಹೊಂಗಿರಣಗಳು ಟಿಸಿಲೊಡೆಯುತ್ತವೆ.

ಇಡೀ ದೇಶದ ಭವಿಷ್ಯವನ್ನು ನಿರ್ಧರಿಸುವ, ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯುವ ಲೋಕಸಭೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಅಭಿವೃದ್ಧಿ ಶೂನ್ಯತೆಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ 2014ರಲ್ಲಿ ಅಧಿಕಾರದ ಗದ್ದುಗೆ ಹಿಡಿದರು. ವಿದೇಶದಲ್ಲಿನ ಕಪ್ಪು ಹಣ ವಾಪಾಸ್ ತರುತ್ತೇವೆ, ಏರಿದ ಬೆಲೆಗಳನ್ನು ನೆಲಕ್ಕೆ ಇಳಿಸುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ಅಮೆರಿಕದ ಡಾಲರ್ ಒಂದು ರೂಪಾಯಿಗೆ ಸಿಗುವಂತೆ ಮಾಡುತ್ತೇವೆ, ಪೆಟ್ರೋಲ್-ಡೀಸೆಲ್ ಅರ್ಧ ಬೆಲೆಗೆ ಕೊಡಿಸುತ್ತೇವೆ….. ಹೀಗೆ ಅದು ಇದು ಎಲ್ಲ ಮಾಡುತ್ತೇವೆ; ಕೇವಲ ಐದು ವರ್ಷ ಅವಧಿ ಕೊಡಿ ಎಂದು ಹೇಳಿ ಚುನಾವಣೆಯನ್ನು ಗೆದ್ದರು. ಸರಿಯಾಗಿ 10 ವರ್ಷವೇ ಕಳೆದುಹೋಗಿದೆ.

ಚುನಾವಣೆ ಹತ್ತಿರವಾಗುತ್ತಿರುವಾಗ 2047ಕ್ಕೆ ದೇಶ ವಿಶ್ವದ ಮುಂಚೂಣಿ ರಾಷ್ಟ್ರವಾಗಲಿದೆ; ಅಲ್ಲಿಯವರೆಗೆ ಕಾಯಿರಿ ಎಂದು ಮೋದಿ ಕರೆ ಕೊಟ್ಟರು. ಚುನಾವಣೆಯ ಅಧಿಕೃತ ಪ್ರಚಾರ ಆರಂಭಿಸಿದ ಮೋದಿಯವರು ‘ಇದು ಅಭಿವೃದ್ಧಿಯ ಟ್ರೇಲರ್ ಅಷ್ಟೆ. ಮುಂದಿದೆ ಸಿನಿಮಾ’ ಎಂದು ಹೇಳಿದ್ದಾರೆ. ಹಾಗಿದ್ದರೆ ಜನ 10 ವರ್ಷ ಇವರ ರೀಲ್ಸ್ ನೋಡಿಕೊಂಡೇ ಸಂತೃಪ್ತಿ ಪಟ್ಟುಕೊಂಡಿದ್ದಾರೆಂದಾಯ್ತು.

ಅದೇ ವೇದಿಕೆಯಲ್ಲಿ ಪರಿಶುದ್ಧ ಮೋದಿಯವರು ಮತ್ತೊಂದು ಮಾತನ್ನು ಹೇಳಿದ್ದಾರೆ. ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು ಭ್ರಷ್ಟರನ್ನು ರಕ್ಷಿಸುತ್ತಿದೆ; ಭ್ರಷ್ಟಾಚಾರವನ್ನು ತೊಲಗಿಸಬೇಕಿದೆ’ ಎಂದು ಕರೆಯನ್ನೂ ಕೊಟ್ಟಿದ್ದಾರೆ. ನಿಜವಾಗಿ ಭ್ರಷ್ಟರನ್ನು ರಕ್ಷಿಸುತ್ತಿರುವುದು ಯಾರು? ಬಿಜೆಪಿಯೆಂಬ ವಾಷಿಂಗ್ ಮೆಷಿನ್ ಒಳಗೆ ಹೋಗಿ, ಭ್ರಷ್ಟತೆಯನ್ನು ಕಳೆದುಕೊಂಡು ಹೊರಬರುತ್ತಿದ್ದಾರೆ. ಬಿಜೆಪಿ ಯಾರನ್ನು ಭ್ರಷ್ಟರೆಂದು ಕರೆದು, ಜೈಲಿಗೆ ಅಟ್ಟುತ್ತೇವೆ ಎಂದು ಹೇಳಿತ್ತೋ ಅಂತವರೆಲ್ಲ ಬಿಜೆಪಿ ಸೇರಿದ ಮೇಲೆ ಪರಿಶುದ್ಧರಾಗಿದ್ದಾರೆ. ಅಂತಹವರು ಯಾರು ಎಂದು ಹೆಸರುಗಳನ್ನು ಉಲ್ಲೇಖಿಸಬೇಕಾಗಿಲ್ಲ.

ಈಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮೋದಿಯವರು, ಬಿಜೆಪಿಯಲ್ಲಿ ಭ್ರಷ್ಟರಿಗೆ ಜಾಗವಿಲ್ಲ ಎಂದು ಅಬ್ಬರಿಸಿದರು. ಆಗ ಎದುರಿನಲ್ಲಿದ್ದ ಸಭಿಕರು, ಭ್ರಷ್ಟರಿಂದ ಬಿಜೆಪಿಯೇ ತುಂಬಿಹೋಗಿದೆ; ಜಾಗ ಇನ್ನೆಲ್ಲಿ ಎಂದು ಕೂಗಿದ್ದರು… ಇದು ಸದ್ಯದ ಪರಿಸ್ಥಿತಿ.

ಚುನಾವಣೆಗೆ ದೇಶವನ್ನು ಅಣಿಗೊಳಿಸಿದ ಮೋದಿ ಮತ್ತು ಬಿಜೆಪಿ ಮೊದಲು ಅಪೂರ್ಣ ರಾಮಮಂದಿರಕ್ಕೆ ಚಾಲನೆ ಹಾಗೂ ಬಾಲರಾಮನ ಪ್ರತಿಷ್ಠಾಪನೆ ಮಾಡಿತು. ಧಾರ್ಮಿಕ ನಂಬುಗೆಗಳ ಪ್ರಕಾರ, ಅಪೂರ್ಣ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವಂತೆಯೇ ಇಲ್ಲ. ಆದರೆ, ಚುನಾವಣೆ ಕಾರಣಕ್ಕೆ ಅದನ್ನು ಬಿಜೆಪಿ ಮಾಡಿಯೇ ಬಿಟ್ಟಿತು. ಅರ್ಚಕರು, ಯಾಜ್ಞಿಕರ ಜಾಗದಲ್ಲಿ ಸ್ವತಃ ಮೋದಿಯವರೇ ನಿಂತು ಪ್ರಾಣಪ್ರತಿಷ್ಠಾಪನೆ ನೆರವೇರಿಸಿದರು. ಅದರ ಬೆನ್ನಲ್ಲೇ, ಕಾಶಿ-ಮಥುರಾಗಳಲ್ಲಿ ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿ ಕಟ್ಟಿಸಲಾಗಿದೆ ಎಂಬ ವಿವಾದವನ್ನು ಮುನ್ನೆಲೆಗೆ ತರಲಾಯಿತು. ಅಲ್ಲದೇ, ಕೋರ್ಟಿನ ಮೊರೆ ಹೋಗಿ, ಅಲ್ಲಿ ಉತ್ಖನನಕ್ಕೆ ಅವಕಾಶ ಕಲ್ಪಿಸಲಾಯಿತು. ಧರ್ಮ ಉದ್ದಾರಕ್ಕೆ ಬಿಜೆಪಿ ಮತ್ತು ಮೋದಿಯವರೇ ಅವತಾರ ಎತ್ತಿದ್ದಾರೆ ಎಂದು ಬಿಂಬಿಸುವ ಯತ್ನ ನಡೆಯಿತು.

ಈ ಬಾರಿ ಬಿಜೆಪಿ 400 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್‌ನ ದಾಖಲೆಯನ್ನು ಮುರಿಯಲಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂಬ ಭರವಸೆಯ ಮಾತುಗಳನ್ನು ಬಿಜೆಪಿಯವರು ಆಡತೊಡಗಿದರು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಬಿಜೆಪಿಯವರಿಗೆ ಅದರಲ್ಲಿ ಭರವಸೆ ಇದ್ದಂತೆ ತೋರುತ್ತಿಲ್ಲ. ಅವರೇ ಆ ಬಗ್ಗೆ ವಿಶ್ವಾಸ ಕಳೆದುಕೊಂಡಂತೆ ಆಡತೊಡಗಿದ್ದಾರೆ.

ಅದೇ ಕಾರಣಕ್ಕೆ ಹೊಸ ವರಸೆಗಳು ಶುರುವಾದಂತೆ ತೋರುತ್ತಿವೆ. 400 ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರ ಹಿಡಿಯುವ ಭರವಸೆ ಇದ್ದರೆ, ಅಷ್ಟೆಲ್ಲ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದರೆ ಅನ್ಯ ಪಕ್ಷಗಳಿಂದ ಭ್ರಷ್ಟರನ್ನು ಸೆಳೆಯುವ ಅಗತ್ಯವೇನಿತ್ತು ಎಂಬುದು ಮೊದಲ ಪ್ರಶ್ನೆ. ಇದಕ್ಕೆ ಬಿಜೆಪಿಯವರಲ್ಲಿ ಉತ್ತರವೇ ಇದ್ದಂತಿಲ್ಲ.
ಎರಡನೇ ಪ್ರಶ್ನೆಯೆಂದರೆ; ಹಿಂದುತ್ವದ ಬಾಯಿ ಬಡುಕರು, ಮಾತೆತ್ತಿದರೆ ಕಡಿ-ಕೊಲ್ಲು-ಕೊಚ್ಚು ಎಂಬುದನ್ನೇ ತಮ್ಮ ನಾಲಿಗೆಯಲ್ಲಿ ಹೊರಳಿಸುವ ಒಬ್ಬರಿಗೂ ಈ ಬಾರಿ ಏಕೆ ಟಿಕೆಟ್ ಕೊಟ್ಟಿಲ್ಲ… ಉಗ್ರ ಹಿಂದುತ್ವದ ಪ್ರತಿಪಾದಕಿ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರಿಗೆ ಈ ಬಾರಿ ಟಿಕೆಟ್ ಕೊಟ್ಟಿಲ್ಲ.

ಕರ್ನಾಟಕಕ್ಕೆ ಬಂದರಂತೂ ಈ ಚಿತ್ರಣ ದಟ್ಟವಾಗಿ ಕಣ್ಣಿಗೆ ಕಟ್ಟುತ್ತದೆ. ರಾಮಮಂದಿರ, ಹನುಮನಗುಡಿ, ಮಸೀದಿ ಒಡೆಯುವುದು, ಮುಸ್ಲಿಮರ ನಾಲಿಗೆ ಕತ್ತರಿಸುವುದು, ದೇಶ ಬಿಟ್ಟು ಓಡಿಸುವುದು, ಸಂವಿಧಾನ ಬದಲಾವಣೆ, ಹಿಂದೂ ರಾಷ್ಟ್ರ ನಿರ್ಮಾಣ, ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದು ಇವೆಲ್ಲ ಮಾತುಗಳನ್ನು ಆಡುತ್ತಿದ್ದವರು ಅನಂತಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್, ಪ್ರತಾಪ ಸಿಂಹ, ಶೋಭಾ ಕರಂದ್ಲಾಜೆ ಮತ್ತು ಕೆ.ಎಸ್. ಈಶ್ವರಪ್ಪ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬೆಂಕಿಯುಗುಳುವ ಮಾತನಾಡುತ್ತಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೊಟ್ಟಿಲ್ಲವೆಂದರೆ ಬಿಜೆಪಿಯವರ 400 ಸೀಟು ಗೆಲ್ಲುವ ವಿಶ್ವಾಸ ಎಷ್ಟು ಪೊಳ್ಳೆಂದು ಗೊತ್ತಾಗುತ್ತದೆ.

ಆಡಳಿತ ವಿರೋಧ ಅಲೆಯ ಕಾರಣಕ್ಕೆ ಟಿಕೆಟ್ ಕೊಟ್ಟಿಲ್ಲವೆಂದರೆ, ಅನಂತಕುಮಾರ್, ಪ್ರತಾಪ ಸಿಂಹ, ಕಟೀಲ್ ಅವರ ನಿಲುವು, ಧೋರಣೆಗಳನ್ನು ಬಿಜೆಪಿಯವರೇ ಒಪ್ಪುತ್ತಿಲ್ಲ; ಅದಕ್ಕೆ ಬದಲಾಯಿಸಿತು ಎಂದುಕೊಳ್ಳೋಣವೇ. ಇನ್ನು, ಇವರೆಲ್ಲರಿಗಿಂತ ಉಗ್ರವಾಗಿದ್ದವರು ಈಶ್ವರಪ್ಪ. ತಮ್ಮ ಎದೆಬಗೆದರೆ ಮೋದಿಯೇ ಇರುತ್ತಾರೆ ಎಂದು ಹೇಳುವಷ್ಟರಮಟ್ಟಿಗೆ ಮುಗ್ಧ. ಅವರ ಮಗನಿಗೂ ಟಿಕೆಟ್ ಕೊಟ್ಟಿಲ್ಲ. ಇವೆಲ್ಲ ಏನನ್ನು ಸೂಚಿಸುತ್ತದೆ. ಹಿಂದುತ್ವಕ್ಕೆ ಈ ಬಾರಿ ಜನ ಮತ ಕೊಡುವುದಿಲ್ಲ ಎಂದು ಭಾವಿಸೋಣವೇ?

ಹೌದು: ಇತ್ತೀಚಿನ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ ಮೋದಿಯವರು ನಿಂತ ನೆಲೆ ಅದುರಲಾರಂಭಿಸಿದೆ; ಬಿಜೆಪಿಯ ಪದತಲ ಕುಸಿಯಲಾರಂಭಿಸಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತಾ ಹೋಗುತ್ತವೆ. ಮೋದಿಯವರು ಪ್ರಧಾನಿಯಾದ ಮೇಲೇ ಭಾರತ ವಿಶ್ವಗುರುವಾಗಿದೆ. ಅಮೆರಿಕದಂತಹ ದೇಶಗಳು ಮೋದಿಯವರ ಮುಂದೆ ತಲೆಬಾಗುತ್ತವೆ. ರಷ್ಯಾ, ಚೀನಾ ಕೂಡ ಮೋದಿಯವರ ಮುಂದೆ ಮಂಡಿಯೂರುತ್ತವೆ ಎಂದೆಲ್ಲ ಭಕ್ತರು ಬಣ್ಣಿಸುವುದುಂಟು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಬಳಿಕ ಮೊದಲು ಜರ್ಮನಿ ಧ್ವನಿ ಎತ್ತಿತು. ಅದರ ಬೆನ್ನಲ್ಲೇ, ಅಮೆರಿಕದ ಶ್ವೇತಭವನದ ವಕ್ತಾರ ಭಾರತದಲ್ಲಿನ ವಿದ್ಯಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿ, ಚುನಾವಣೆ ಪಾರದರ್ಶಕವಾಗಿ ನಡೆಯುತ್ತದೆ ಎಂದು ವಿಶ್ವಾಸ ವಿರಿಸಿಕೊಂಡಿರುವುದಾಗಿ ಹೇಳಿದರು. ಭಾರತದ ಹೈಕಮಿಷನರ್, ಅಲ್ಲಿಯ ರಾಯಭಾರಿಯನ್ನು ಕರೆಸಿ ತನ್ನಪ್ರತಿಭಟನೆಯನ್ನು ಸೂಚಿಸಿದರು. ಅದಕ್ಕೆ, ಅಮೆರಿಕ ಸೊಪ್ಪು ಹಾಕಿದಂತೆ ಕಾಣಲಿಲ್ಲ. ಅಮೇರಿಕದ ಸಚಿವರೇ ಮತ್ತೆ ಮಾತನಾಡಿ, ತನ್ನ ನಿಲುವಿನಲ್ಲಿ ಬದಲಾವಣೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಈ ಚುನಾವಣೆಯಲ್ಲಿ ಮೋದಿಯವರ ಬಲ ಕುಗ್ಗುತ್ತಿರುವುದಕ್ಕೆ ಸಾಕ್ಷಿ ಬೇಕಿಲ್ಲ. ಏಕೆಂದರೆ, ಮೋದಿಯವರನ್ನೇ ಮೆಚ್ಚಿ ಹೊಗಳುತ್ತಿದ್ದ ರಾಷ್ಟ್ರಗಳು, ಈಗ ಅಪಸ್ವರ ತೆಗೆಯುತ್ತಿವೆ ಎಂದರೆ, ಇಲ್ಲಿ ಮೋದಿ ಬಲ ಕುಂದಿರುವುದರ ದ್ಯೋತಕವಲ್ಲದೇ ಮತ್ತೇನಲ್ಲ. ಭಾರತದಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು; ಅದಕ್ಕೆ ಸ್ವಾತಂತ್ರ್ಯವಿದೆ. ಆದರೆ ಅಮೆರಿಕ ಸರ್ಕಾರದ ಪರವಾಗಿ ಸಚಿವರೊಬ್ಬರು ಮಾತನಾಡಬೇಕೆಂದರೆ ಅಲ್ಲಿ ಅಧಿಕೃತ ವಕ್ತಾರರಷ್ಟೇ ಮಾತನಾಡಬೇಕು; ಅದು ಆ ದೇಶದ ವಿದ್ಯಮಾನದ ಬಗ್ಗೆಯಾಗಲಿ; ವಿದೇಶದ ನೀತಿಗಳ ಬಗ್ಗೆಯಾಗಲಿ ಬೇಕಾಬಿಟ್ಟಿ ಮಾತನಾಡುವ ಪರಿಪಾಠ ಅಲ್ಲಿ ಇಲ್ಲ.

ಇದು ಅಷ್ಟಕ್ಕೇ ನಿಲ್ಲುವುದಿಲ್ಲ; ಜರ್ಮನಿ-ಅಮೇರಿಕ ಮಾತನಾಡಿದ ಬೆನ್ನಲ್ಲೇ ವಿಶ್ವಸಂಸ್ಥೆ ಕೂಡ ಭಾರತದ ಚುನಾವಣೆ ಮತ್ತು ರಾಜಕಾರಣದ ಬಗ್ಗೆ ಮೊದಲ ಬಾರಿಗೆ ಮಾತನಾಡಿದೆ. ಕೇಜ್ರಿವಾಲ್ ಬಂಧನ ಹಾಗೂ ಚುನಾವಣೆಯ ಪಾರದರ್ಶಕತೆ ಕುರಿತಂತೆ ಅದು ಪ್ರಸ್ತಾಪಿಸಿದೆ. ತಕರಾರನ್ನು ತೆಗೆಯದಿದ್ದರೂ, ಇಲ್ಲಿಯ ವಿಷಯವನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಿ, ಆಕ್ಷೇಪಾರ್ಹ ಧ್ವನಿಯನ್ನು ಹೊರಡಿಸಿದೆ. ಮೋದಿಯವರ ಬಲ ಇಳಿಯುತ್ತಿರುವುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿ ಕಾಣುತ್ತದೆ.

400 ಸ್ಥಾನಗಳನ್ನು ಗೆದ್ದು ದಾಖಲೆ ಮಾಡಲು ಹೊರಟಿರುವ ಮೋದಿ-ಅಮಿತ್ ಶಾ ಬಳಗಕ್ಕೆ ತನ್ನ ಶಕ್ತಿಯೊಂದೇ ಸಾಕಾಗುವುದಿಲ್ಲ ಎಂಬುದು ಅರ್ಥವಾಗಿ ಹೋಗಿದೆ. ಅದಕ್ಕಾಗಿಯೇ, ಕೇಜ್ರಿವಾಲ್‌ರನ್ನು ಜೈಲಿಗೆ ತಳ್ಳಲಾಗಿದೆ. ಕೇಜ್ರಿವಾಲ್‌ರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಕಾರಣ ಕೊಡಿ ಎಂದು ಕೋರ್ಟ್ ಕೇಳಿದ್ದಕ್ಕೆ ಉತ್ತರಿಸಿದ ಜಾರಿ ನಿರ್ದೇಶನಾಲಯದ ವಕೀಲರು, 15 ದಿನ ಸಮಯ ಕೇಳಿದ್ದಾರೆ. ಬಂಧನವನ್ನು ಸಮರ್ಥಿಸಲು ಕಾರಣಗಳೇ ಇಲ್ಲ. ದೆಹಲಿ, ಪಂಜಾಬ್‌ನಲ್ಲಿ ಆಮ್ ಆದ್ಮಿ ಬಲ ಕುಗ್ಗಿಸುವುದು ಕೇಜ್ರಿವಾಲ್ ಬಂಧನದ ಹಿಂದಿನ ತಂತ್ರ ಎಂಬುದೇನೂ ರಹಸ್ಯವಲ್ಲ.

ಇದು ಅಷ್ಟು ಮಾತ್ರಕ್ಕೆ ನಿಲ್ಲುವುದಿಲ್ಲ. ಚುನಾವಣೆವರೆಗೆ ಸುಮ್ಮನಿದ್ದ ಆದಾಯ ತೆರಿಗೆ ಇಲಾಖೆ ದಿಢೀರ್ ಕಾರ್ಯಪ್ರವೃತ್ತವಾಗಿದೆ. ಕಾಂಗ್ರೆಸ್‌ನ ಎಲ್ಲ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿರುವ ಆದಾಯ ತೆರಿಗೆ ಇಲಾಖೆ, 1,846 ಕೋಟಿ ದಂಡ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ. ಅದೇ ರೀತಿಯಲ್ಲಿ 48 ಕೋಟಿ ಕಟ್ಟುವಂತೆ ಸಿಪಿಎಂ ಪಕ್ಷಕ್ಕೂ ನೋಟಿಸ್ ಜಾರಿ ಮಾಡಿದೆ. ಇವೆಲ್ಲವೂ ಕೈಲಾಗದವು ಮೈ ಪರಚಿಕೊಂಡ ಎಂಬಂತ ನಡೆಯೇ ವಿನಃ, ಸಮರ್ಥ ನಾಯಕತ್ವದ ನಡೆಯಂತೂ ಅಲ್ಲವೇ ಅಲ್ಲ.

ಬಿಜೆಪಿ ದುರ್ಬಲಗೊಳ್ಳುತ್ತಿರುವುದಕ್ಕೆ ಕರ್ನಾಟಕದ ನಿದರ್ಶನವನ್ನೇ ನೋಡಬಹುದು. ಬಿಜೆಪಿ ವರಿಷ್ಠರ ಆದೇಶವನ್ನು, ಅದರಲ್ಲೂ ಮೋದಿ-ಅಮಿತ್ ಶಾ ಹೇಳಿದರೆ ಯಾರೊಬ್ಬರೂ ಅದರ ವಿರುದ್ಧ ಮಿಸುಕಾಡುವುದಿಲ್ಲ. ಕರ್ನಾಟಕದ ಬಿಜೆಪಿಯಲ್ಲಿ ಬಂಡಾಯವಂತೂ ಕಂಡಿದ್ದೇ ಇಲ್ಲ. ಪ್ರಶ್ನೆ ಮಾಡಿದರೆ, ಬಂಡಾಯವಾಗಿ ಸ್ಪರ್ಧಿಸಿದರೆ ಎಲ್ಲಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುತ್ತೇವೋ ಎಂಬ ಭಯವೇ ಅವರನ್ನು ಕಾಡುತ್ತಿತ್ತು. ಈ ಬಾರಿ ಹೋದಲ್ಲಿ-ಬಂದಲ್ಲಿ ಬಂಡಾಯವೇ ದೊಡ್ಡಾಗಿದೆ. ಶಾಸಕರು ಕೂಡ ತಿರುಗಿ ಬೀಳುತ್ತಿದ್ದಾರೆ.

ಪಕ್ಷವನ್ನು ತಾಯಿ, ಮೋದಿಯನ್ನು ತಂದೆ ಎನ್ನುತ್ತಿದ್ದ ಕೆ.ಎಸ್. ಈಶ್ವರಪ್ಪ, ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ವಿರುದ್ದ ಪ್ರಭಾಕರ ಕೋರೆ, ಮಹಂತೇಶ ಕವಠಗಿಮಠ ಅಂತಹವರೇ ತಿರುಗಿಬಿದ್ದಿದ್ದರು. ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಇನ್ನೂ ಆಕ್ರೋಶದಲ್ಲೇ ಇದ್ದಾರೆ. ಚಿತ್ರದುರ್ಗದಲ್ಲಿ ಶಾಸಕ ಎಂ. ಚಂದ್ರಪ್ಪ, ತಮ್ಮ ಮಗನನ್ನೆ ಕಣಕ್ಕೆ ಇಳಿಸುವುದಾಗಿ ಗುಟುರು ಹಾಕಿದ್ದಾರೆ. ತುಮಕೂರಿನಲ್ಲಿ ಮಾಜಿ ಸಚಿವ ಮಾಧುಸ್ವಾಮಿ, ವಿ ಸೋಮಣ್ಣ ವಿರುದ್ಧ ಹರಿಹಾಯ್ದಿದ್ದಾರೆ. ರಾಯಚೂರಿನಲ್ಲಿ ಮಾಜಿ ಸಂಸದ ಬಿ.ವಿ. ನಾಯಕ ಹಾಗೂ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಗುಡುಗುತ್ತಲೇ ಇದ್ದಾರೆ. ಯಾರು-ಯಾರನ್ನು ಕೇಳುವ ಪರಿಸ್ಥಿತಿಯಲ್ಲೇ ಇಲ್ಲ.

ಮೊದಲೆಲ್ಲ ಬಿಜೆಪಿ ಹೈಕಮಾಂಡ್ ಎಂದರೆ ಖಡಕ್, ಕಂಡಾಪಟ್ಟೆ ಶಿಸ್ತಿನ ಕೂಟ ಎಂದೆಲ್ಲ ಬಣ್ಣಿಸಿಕೊಳ್ಳುತ್ತಿದ್ದುದು ಉಂಟು. ಈ ಬಾರಿ, ಮೋದಿ-ಅಮಿತ್ ಶಾ ಅವರನ್ನೇ ಯಾರೂ ಲೆಕ್ಕಕ್ಕೆ ಇಟ್ಟುಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ, ತವರು ಜಿಲ್ಲೆಗೆ ಮೋದಿ ಬಂದಿದ್ದಾಗಲೇ, ಈಶ್ವರಪ್ಪ ಬಂಡಾಯ ಸಾರಿದ್ದರು. ಅಷ್ಟರಮಟ್ಟಿಗೆ ಪಕ್ಷದ ನಾಯಕತ್ವ ದುರ್ಬಲವಾಗಿದೆಯೆಂದರೆ, ಈ ಬಾರಿ ಪಕ್ಷದ ನೆಲೆ ಅಲುಗಾಡುತ್ತಿದೆ ಎಂದರ್ಥ.

ಅಷ್ಟೆಲ್ಲ ಆದರೂ, ಎದುರಾಳಿಯನ್ನು ಮಣಿಸಿ, ಹೊಸಕಿ, ನಾನಾ ತಂತ್ರಗಳನ್ನು ಹೂಡಿ ಚುನಾವಣೆಯಲ್ಲಿ ಗೆಲ್ಲುವ ತವಕ ಮಾತ್ರ ಬಿಜೆಪಿಯವರಲ್ಲಿ ಕಾಣಿಸುತ್ತಿದೆ. ನೆಲ ಅದುರುತ್ತಿದ್ದರೂ ನಕ್ಷತ್ರ ಹಿಡಿದುಕೊಂಡು ನೇತಾಡುವ ಪರಿಸ್ಥಿತಿಯಲ್ಲಿ ಬಿಜೆಪಿ ಬಿದ್ದಿರುವುದು ಗೋಚರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಬಹುಮತಪಡೆದು ಅಧಿಕಾರ ಹಿಡಿಯತ್ತದೆ ಎಂದು ಯಾರಾದರೂ ನಂಬಲು ಸಾಧ್ಯವೇ?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments