“ಜಗದೀಶ ಶೆಟ್ಟರ್ ಅವರದು ಬೇರೆ ಪ್ರಕರಣ, ಲಕ್ಷ್ಮಣ ಸವದಿ ಅವರದು ಬೇರೆ ಕೇಸ್. ಒಂದು ಕೇಸ್ ಅನ್ನು ಇನ್ನೊಂದಕ್ಕೆ ಹೋಲಿಸಲಾಗದು. ಶಾಸಕರಾದ ಲಕ್ಷ್ಮಣ ಸವದಿ ನಮ್ಮ ಪಕ್ಷದ ಪರವಾಗಿದ್ದಾರೆ. ಅವರು ಕಾಂಗ್ರೆಸ್ ಬಿಡುವುದಿಲ್ಲ” ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಸವದಿ ಬಿಜೆಪಿ ಸೇರುತ್ತಾರೆ ಎಂಬುದು ಸುಳ್ಳು. ಎಲ್ಲ ಕೇಸ್ ಬೇರೆ ಬೇರೆ ಇರುತ್ತವೆ. ಜಗದೀಶ್ ಶೆಟ್ಟರ್ ಕೇಸ್‌ಗೆ ಹೋಲಿಕೆ ಬೇಡ” ಎಂದರು.
ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನದ ಆಫರ್ ನೀಡಲಾಗಿದೆಯೇ ಎಂಬ ಪ್ರಶ್ನೆಗೆ, “ಒಳ್ಳೆಯವರಿಗೆ ಅವಕಾಶವಿದೆ. ಅವರಿಗೂ ಸಾಮರ್ಥ್ಯವಿದೆ. ಆ ಬಗ್ಗೆ ಇನ್ನೂ ಸಮಯವಿದೆ. ಉತ್ತಮ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಸಿಗುವ ಅವಕಾಶಗಳು ಮುಂದಿನ ದಿನಗಳಲ್ಲಿವೆ” ಎಂದರು.
ಲೋಕಸಭೆ ಚುನಾವಣೆ ವಿಚಾರವಾಗಿ ಮಾತನಾಡಿ, ಬೆಳಗಾವಿ ಲೋಕಸಭೆ ಕ್ಷೇತ್ರದ ಟಿಕೆಟ್‌ಗೆ ಇಬ್ಬರ ಹೆಸರು ಕೊಟ್ಟಿದ್ದೇವೆ. ಆದರೆ, ಒಬ್ಬರ ಹೆಸರನ್ನು ಪಕ್ಷದ ಹೈಕಮಾಂಡ್ ಅಂತಿಮಗೊಳಿಸಬೇಕಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಜತೆಗೆ, ಇನ್ನೊಂದು ಸುತ್ತಿನ ಚರ್ಚೆ ಆಗಬೇಕಿದೆ” ಎಂದು ಹೇಳಿದರು.
“ಚಿಕ್ಕೋಡಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ. ಪ್ರತಿ ಬಾರಿ ಒದಿಸಿಕೊಳ್ಳಲು ನಾನೇನೂ ಫುಟ್‌ಬಾಲ್ ಅಲ್ಲ” ಎಂದಿರುವ ಪ್ರಕಾಶ ಹುಕ್ಕೇರಿ ಮಾತಿಗೆ ಪ್ರತಿಕ್ರಿಯಿಸಿ, “ಪ್ರಕಾಶ್ ಹುಕ್ಕೇರಿ ಸ್ಪರ್ಧಿಸುವುದಿಲ್ಲ ಎಂದಾಗ ಸ್ಪರ್ಧಿಸುತ್ತಾರೆ. ಸ್ಪರ್ಧಿಸುತ್ತೇನೆ ಎಂದಾಗ ಸ್ಪರ್ಧಿಸಲ್ಲ. ಅವರ ಕೋಡ್ ಲಾಂಗ್ವೇಜ್ ನಮಗೆ ಗೊತ್ತಿದೆ” ಎಂದರು.
ಧ್ವಜ ವಿಚಾರವಾಗಿ ಮಾತನಾಡಿ, “ರಾಜ್ಯ ಅಭಿವೃದ್ಧಿಯಾಗಬೇಕು, ಸಮಾನತೆ ಬರಬೇಕು. ಈ ಧ್ವಜಗಳ ಹಾವಳಿ ಬಂದ್ ಆಗಬೇಕು” ಎಂದು ಹೇಳಿದರು.