ಹಿರಿಯ ಸಂಶೋಧಕ, ಇತಿಹಾಸಕಾರ, ದಾಸಸಾಹಿತ್ಯ ವಿದ್ವಾಂಸರಾಗಿರುವ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಬಹುಶ್ರುತರಾಗಿದ್ದು, ಅಪ್ರತಿಮ ಸಾಧಕರಾಗಿದ್ದಾರೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಬಣ್ಣಿಸಿದರು.
ಬೆಂಗಳೂರು ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ‘ಕೃಷ್ಣ ಅಧ್ಯಯನ’ ಅಭಿನಂದನಾ ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಕುಲಕರ್ಣಿಯವರು ನಮ್ಮ ಊರಾದ ವಿಜಯಪುರದವರು ಎನ್ನುವುದು ಅಭಿಮಾನದ ಸಂಗತಿಯಾಗಿದೆ. ಜತೆಗೆ ಅವರು ನಮ್ಮ ಹಿರಿಯರು ಕಟ್ಟಿರುವ ಬಿಎಲ್ ಡಿ ಇ ಶಿಕ್ಷಣ ಸಂಸ್ಥೆಯ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಜತೆಗಿನ ಸಂಬಂಧ ಗಾಢವಾದುದು. ನೀರಾವರಿ, ಗಮಕ, ಆದಿಲಶಾಹಿ ಇತಿಹಾಸ, ಗ್ರಂಥ ಸಂಪಾದನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಈಗಲೂ ದುಡಿಯುತ್ತಿರುವ ಅವರನ್ನು ಕಿರಿಯರು ಆದರ್ಶವಾಗಿ ಸ್ವೀಕರಿಸಬೇಕು” ಎಂದರು.
“ಕುಲಕರ್ಣಿ ಅವರು ಮೂಲತಃ ಶಿಕ್ಷಣ ಕ್ಷೇತ್ರದವರೇನಲ್ಲ. ಆದರೆ, ಫ ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಚುಕ್ಕಾಣಿ ಹಿಡಿದು ಅವರು ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಒಂದು ವಿಶ್ವವಿದ್ಯಾಲಯ ಮಾಡುವಂತಹ ಮೌಲಿಕ ಕೆಲಸಗಳನ್ನು ಮಾಡಿದ್ದಾರೆ. ಇದು ಸಾರಸ್ವತ ಲೋಕದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ” ಎಂದು ಮೆಚ್ಚುಗೆ ಸೂಸಿದರು.
ಕಾರ್ಯಕ್ರಮದಲ್ಲಿ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, “ಕುಲಕರ್ಣಿ ಅವರಿಂದ ಕೃಷ್ಣಾ ನದಿಯ ಇತಿಹಾಸವನ್ನು ದಾಖಲಿಸುವ ಕೆಲಸ ಆಗಬೇಕು. ಹಾಗೆಯೇ ಕುಲಕರ್ಣಿ ಅವರ ಸಮಗ್ರ ಸಾಹಿತ್ಯ ಕೂಡ ಹೊರತರಬೇಕು” ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು. ವಿದ್ವಾಂಸ ಸತ್ಯಧ್ಯಾನಾಚಾರ್ಯ ಮಾತನಾಡಿದರು. ಡಾ.ಬಸವರಾಜ ಡೋಣೂರು ಗ್ರಂಥ ಪರಿಚಯ ಮಾಡಿದರು.
ಸಚಿವ ಎಂ.ಬಿ.ಪಾಟೀಲ್ ಅವರ ಪತ್ನಿ ಆಶಾ ಪಾಟೀಲ, ಕೊಲ್ಹಾರ ಕುಲಕರ್ಣಿ ಮತ್ತು ಅವರ ಪತ್ನಿ ವಿಜಯ ಹಾಜರಿದ್ದರು.