Homeಕರ್ನಾಟಕಗುಣ, ಹಿನ್ನೆಲೆ ತಿಳಿದುಕೊಂಡು ಅರ್ಹರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಿ: ಮಲ್ಲಿಕಾರ್ಜುನ ಖರ್ಗೆ

ಗುಣ, ಹಿನ್ನೆಲೆ ತಿಳಿದುಕೊಂಡು ಅರ್ಹರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಿ: ಮಲ್ಲಿಕಾರ್ಜುನ ಖರ್ಗೆ

ಒಂದು ವಸ್ತು ಕೊಳ್ಳಬೇಕಾದರೆ ಹತ್ತಾರು ಸಲ ಯೋಚಿಸಿ ತೆಗೆದುಕೊಳ್ಳುತ್ತೇವೆ. ಹಾಗೆ ಪಕ್ಷಕ್ಕೆ ಯಾರನ್ನಾದರೂ ತೆಗೆದುಕೊಳ್ಳಬೇಕಾದರೆ ಅವರ ಗುಣ, ಹಿನ್ನೆಲೆ, ಅವರ ತತ್ವ ಯಾವುದು ಎಂಬುದನ್ನು ಪರಿಶೀಲಿಸಿ. ಅರ್ಹರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

75ನೇ ಗಣರಾಜ್ಯೋತ್ಸವದ ಅಂಗವಾಗಿ ಕೆಪಿಸಿಸಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಮಾತಾಡಿದ ಖರ್ಗೆ ಅವರು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

“ಕಾಂಗ್ರಸಿನೊಳಗೆ ಯಾರೇ ಬಂದರೂ ಸೇರಿಸಿಕೊಂಡು ಶಕ್ತಿಯನ್ನು ತುಂಬುವಂತಹ ಕೆಲಸ ಮಾಡಬೇಕು. ಹಾಗೆ ಪಕ್ಷಕ್ಕೆ ಬರುವವರು ನಿಷ್ಠಾವಂತರಾಗಿರಬೇಕು. ಇವತ್ತು ಬಂದು ನಾಳೆ ಹೋಗುವಂತೆ ಇರಬಾರದು” ಎಂದು ಕಿವಿಮಾತು ಹೇಳಿದರು.

“ನಮ್ಮ ಕಾಂಗ್ರೆಸ್‌ ಪಕ್ಷವು ತತ್ವ ಸಿದ್ಧಾಂತದ ಆಧಾರದ ಮೇಲೆ ನಿಂತಿದೆ. ತತ್ವಕ್ಕಾಗಿಯೇ ನಮ್ಮ ಪಕ್ಷದಲ್ಲಿ ಇಂದಿರಾಗಾಂಧಿಯವರು, ರಾಜೀವ್‌ ಗಾಂಧಿಯವರು ತಮ್ಮ ಜೀವವನ್ನೆ ತ್ಯಾಗ ಮಾಡಿದ್ದಾರೆ. ನಮ್ಮ ಪಕ್ಷ ತತ್ವಕ್ಕೆ ಬದ್ಧವಾಗಿದೆ, ನಮಗೆ ಬಡವರ ಬಗ್ಗೆ, ರೈತರ ಬಗ್ಗೆ, ವಿಧ್ಯಾರ್ಥಿಗಳ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಅಪಾರ ಕಾಳಜಿ ಇರುವ ಪಕ್ಷ” ಎಂದರು.

“ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಎರಡಕ್ಕೂ ಧಕ್ಕೆ ಇದೆ. ಇದರಿಂದ ನಮ್ಮ ಯುವಪೀಳಿಗೆಗೆ ಇನ್ನೂ ಹೆಚ್ಚಿನ ಅಪಾಯ ಇದೆ. ದಿನೇ ದಿನೇ ಹಣದುಬ್ಬರ, ನಿರುದ್ಯೋಗ ಸಮಸ್ಯೆ ಏರುತ್ತಿದೆ. ಈ ಅನಾಹುತವನ್ನು ತಡೆಯಬೇಕು ಎಂದರೆ ಬರುವ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲರು ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು” ಎಂದು ಕರೆ ನೀಡಿದರು.

“ಭಾರತದ ಇತಿಹಾಸದಲ್ಲಿ ಜನವರಿ 26 ವಿಶೇಷವಾದ ದಿನ. ಈ ದೇಶದಲ್ಲಿ ಸಂವಿಧಾನ ಅಸ್ತಿತ್ವದಲ್ಲಿ ಇರದಿದ್ದರೆ ನಾವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಮತ್ತು ಸಂವಿಧಾನ ಸಭೆಯ ನಾಯಕರು ಸೇರಿ ನಮ್ಮ ಸಂವಿಧಾನ ರಚಿಸಿದರು. ನಮ್ಮ ಸಂವಿಧಾನವು ಪ್ರಮುಖವಾಗಿ ಸಮಾನತೆ, ಭಾತೃತ್ವ, ಜಾತ್ಯಾತೀತತೆ, ನ್ಯಾಯ ತತ್ವಗಳಿಂದ ಕೂಡಿದೆ” ಎಂದರು.

“ಸಂವಿಧಾನ ತಿರುಚಬೇಕೆಂದು, ಸಂವಿಧಾನ ಬದಲಿಸಬೇಕೆಂದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಪ್ರಯತ್ನ ಮಾಡುತ್ತಿವೆ. ನಮ್ಮ ಸ್ವಾಯತ್ತ ಸಂಸ್ಥೆಗಳನ್ನು ಒಂದೊಂದಾಗಿ ನಾಶಮಾಡುತ್ತಾ ಅದರ ಶಕ್ತಿಯನ್ನು ಕಡಿಮೆ ಮಾಡಲು ಬಿಜೆಪಿಯವರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದು, ಅದರಿಂದ ನಮ್ಮ ದೇಶದ ನ್ಯಾಯಾಂಗಕ್ಕೆ, ಜಾತ್ಯಾತೀತತೆಗೆ ಪೆಟ್ಟು ಬೀಳುತ್ತಿದೆ” ಎಂದು ಆರೋಪಿಸಿದರು.

“ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಮಂತ್ರಿಯವರು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಮತ್ತು ಸಂವಿಧಾನ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಉಳಿಯುತ್ತದೆ. ಇಲ್ಲವಾದರೆ ಮುಂದಿನ ಪೀಳಿಗೆ ಎಲ್ಲದರಲ್ಲೂ ಅವಕಾಶ ವಂಚಿತರಾಗುತ್ತಾರೆ” ಎಂದರು.

“ಸ್ವಾತಂತ್ರ್ಯ ಬಂದಾಗಿನಿಂದ 2014ರ ವರೆಗೆ ಈ ದೇಶದ ಸಾಲ 55 ಲಕ್ಷ ಕೋಟಿ ಇತ್ತು, ಆದರೆ ಈಗ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ 150 ಲಕ್ಷ ಕೋಟಿ ಸಾಲ ಮಾಡಿದೆ” ಎಂದು ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments