Homeಕರ್ನಾಟಕಕೆರಗೋಡು ಧ್ವಜ ವಿವಾದ | ನಾನು ಮಂಡ್ಯ ಜಿಲ್ಲೆ ಹಾಳು ಮಾಡೋಕೆ‌ ಬಂದಿದ್ದೀನಾ: ಕುಮಾರಸ್ವಾಮಿ ಪ್ರಶ್ನೆ

ಕೆರಗೋಡು ಧ್ವಜ ವಿವಾದ | ನಾನು ಮಂಡ್ಯ ಜಿಲ್ಲೆ ಹಾಳು ಮಾಡೋಕೆ‌ ಬಂದಿದ್ದೀನಾ: ಕುಮಾರಸ್ವಾಮಿ ಪ್ರಶ್ನೆ

ಧ್ವಜ ತೆರವು ವಿಚಾರವಾಗಿ ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ. ಕೆರಗೋಡಿನ ಬಸ್ ನಿಲ್ದಾಣದ ಧ್ವಜಸ್ತಂಭ ಸ್ಥಾಪನೆಗೆ ಮನವಿ ಮಾಡಿದ್ದ ಗೌರಿ ಶಂಕರ್ ಸೇವಾ ಟ್ರಸ್ಟ್, ಯಾವ ಧ್ವಜ ಅಂತ ಹೇಳಿರಲಿಲ್ಲ. ಅದಕ್ಕೆ ಅನುಮತಿ ನೀಡಲಾಗಿತ್ತು. ಈಗ ಸರ್ಕಾರವೇ ನಕಲಿ ದಾಖಲೆ ಸರ್ಕಾರ ಸೃಷ್ಟಿ ಮಾಡಿಕೊಂಡು ಆರೋಪ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್ ಡಿ‌ ಕುಮಾರಸ್ವಾಮಿ ಆರೋಪಿಸಿದರು.

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ ಸಚಿವ ಎನ್​ ಚಲುವರಾಯಸ್ವಾಮಿ ಮಾಡಿರುವ ಆರೋಪಗಳಿಗೆ ಸುದ್ದಿಗೋಷ್ಠಿ ನಡೆಸಿ ತೀಕ್ಷ್ಣ ತಿರುಗೇಟು ನೀಡಿದರು.

“ಗೌರಿ ಶಂಕರ್ ಟ್ರಸ್ಟ್​ಗೆ ನವೆಂಬರ್ ತಿಂಗಳಲ್ಲಿ ಅನುಮತಿ ನೀಡಲಾಗಿತ್ತು. ಇಂಥದ್ದೇ ಧ್ವಜ ಎಂದು ಎಲ್ಲಿಯೂ ಉಲ್ಲೇಖಿಸಿರಲಿಲ್ಲ. 2023ರ ಡಿಸೆಂಬರ್ 29ರಂದು ಮತ್ತೆ ಹೊಸ ಅರ್ಜಿ ತೆಗೆದುಕೊಂಡಿದ್ದಾರೆ. ಅದನ್ನು ತಿದ್ದಿಕೊಂಡಿದ್ದಾರೆ. ಇದರಲ್ಲಿ ತ್ರಿವರ್ಣ ಧ್ವಜ, ಕನ್ನಡ ಧ್ವಜ ಹಾಕಲು ಅನುಮತಿ ನೀಡಿದ್ದೇವೆ ಎಂದಿದೆ. ಜನವರಿ ತಿಂಗಳಲ್ಲಿ ಪತ್ರ ಸೃಷ್ಟಿ ಮಾಡಿಕೊಳ್ಳಲಾಗಿದೆ. ಮುಚ್ಚಳಿಕೆಯಲ್ಲಿರುವ ಹೆಸರು, ಅರ್ಜಿಗಳಲ್ಲಿ ಬೇರೆ ಹೆಸರುಗಳು ಇವೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಿಮ್ಮಿಂದ ಕಲಿಯಬೇಕಾ ಚಲುವರಾಯಸ್ವಾಮಿ ಅವರೇ?

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ವಿನಯಕ್ಕೆ ನಮಸ್ಕಾರ. ನಾನು ನಿಮ್ಮಿಂದ ಕಲಿಯಬೇಕಾ? 200 ಜನ ರೈತರು ಆತ್ಮಹತ್ಯೆ ಮಾಡಿಕೊಂಡರು. ನೀವು ಒಂದು ರೂಪಾಯಿ ಕೂಡ ಬಿಚ್ಚಿಲ್ಲ. ನನ್ನ ದುಡಿಮೆ ಹಣ ಕೊಟ್ಟು ಬಂದಿದ್ದೇನೆ. ಅದೂ ಸಹ ವರ್ಗಾವಣೆ ದಂಧೆಯಿಂದ ಬಂದ‌ ಹಣ ಅಲ್ಲ. ನಿಮ್ಮಿಂದ ವಿನಯ ಕಲಿಯಬೇಕಿಲ್ಲ. ನಾನು ಜಿಲ್ಲೆ ಹಾಳು ಮಾಡೋಕೆ‌ ಬಂದಿದ್ದೇನೆಯೇ? ಮಂಡ್ಯ ಜಿಲ್ಲೆಯ ಜನರ ಸರ್ಟಿಫಿಕೇಟ್‌ ನನ್ನ ಹತ್ರ ಇದೆ” ಎಂದರು.

“ನಾನು ಸೋಮವಾರದ ಭಾಷಣದಲ್ಲಿ ಬೆಂಕಿ‌‌ ಹಚ್ಚಿ‌, ಫ್ಲೆಕ್ಸ್ ಹರಿಯಿರಿ ಅಂತ ಹೇಳಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಆಗ್ರಹಿಸಿದ್ದೆ ಅಷ್ಟೆ. ಕೆರೆಗೋಡಿನ ಜನತೆ ಜನವರಿ 26 ರಂದು ರಾಷ್ಟ್ರ ಧ್ವಜ ಹಾರಿಸಿದ್ದಾರೆಯೇ ವಿನಃ ಸರ್ಕಾರ ಅಲ್ಲ. ಕಾಂಗ್ರೆಸ್ ಶಾಸಕರನ್ನು ಕರೆದಿಲ್ಲ ಎಂದು ಈ ಗಲಾಟೆ ಆರಂಭ ಆಗಿದೆ” ಎಂದು ದೂರಿದರು.

ಕೇಸರಿ ಶಾಲು ಹಾಕುವುದು ತಪ್ಪೇ?

“ಪಾಪ ಹಳೆಯ ಸ್ನೇಹಿತರು (ಚಲುವರಾಯಸ್ವಾಮಿ) ಹೇಳಿದ್ದಾರೆ, ಕುಮಾರಸ್ವಾಮಿ ಕೇಸರಿ ಶಾಲು‌‌ ಹಾಕಿಕೊಂಡು ಜೆಡಿಎಸ್ ಕಾರ್ಯಕರ್ತರ ಶಕ್ತಿ ಕೊನೆಗೊಳಿಸಲು ಹೊರಟಿದ್ದಾರೆ ಎಂದು. ನಾನು ಕೇಸರಿ ಶಾಲು ಹಾಕಿಕೊಂಡಿದ್ದು ಮಹಾನ್ ಅಪರಾಧವಾ? ಕಾಂಗ್ರೆಸ್​​ನವರಿಗೆ ಕೇಸರಿ ಮೇಲೆ ಯಾಕೆ ಸಂಕುಚಿತ ಮನೋಭಾವ? ಮಂಡ್ಯ ಉಸ್ತುವಾರಿ ಸಚಿವರಿಂದ ನಾನು ನನ್ನ ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಕಲಿಯಬೇಕಿಲ್ಲ. ನನಗೆ ಜನ ಕೊಟ್ಟಿರುವ ಪ್ರೀತಿ ಇದೆ” ಎಂದು ತಿರುಗೇಟು ನೀಡಿದರು.

“ಕಳೆದ ಎರಡು ದಿನಗಳಿಂದ ಮಂಡ್ಯದಲ್ಲಿ ಆರಂಭ ಆಗಿರುವ ಒಂದು ಘಟನೆಯಿಂದಾಗಿ ಈ‌ ಸರ್ಕಾರದ ಕೆಲ ನಡವಳಿಕೆ ಬಗ್ಗೆ ‌ಮತನಾಡಲೇಬೇಕಿದೆ. ಮಾಜಿ ಸಿಎಂ ದಿ. ದೇವರಾಜು ಅರಸು ಅವರಿಗಿಂತ ಸಿಎಂ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿ ಶೋಷಿತರ ಧ್ವನಿಯಾಗಿ ಚಿತ್ರದುರ್ಗದಲ್ಲಿ ಮಾಡಿದ ವೀರಾವೇಷದ ಭಾಷಣ ಕೇಳಿದ್ದೇನೆ. ಮತ್ತೊಂದೆಡೆ, ಮಂಡ್ಯದಲ್ಲಿ ನಮ್ಮ ಹಳೆಯ ಸ್ನೇಹಿತ ಮಾತನಾಡಿರುವುದನ್ನೂ ಕೇಳಿದ್ದೇನೆ. ಮಂಡ್ಯವನ್ನು ಹಾಳು ಮಾಡಲು ಕುಮಾರಸ್ವಾಮಿ ಬಂದಿದ್ದಾರೆ ಎಂದಿದ್ದಾರೆ. ಮಂಡ್ಯದಲ್ಲಿ ನೆಡೆದ ಘಟನೆಗೂ ನನಗೂ ಏನೂ ಸಂಬಂಧ ಎಂದು ಸಿಎಂ ಮತ್ತು ಉಸ್ತುವಾರಿ ಸಚಿವರನ್ನು ಕೇಳುತ್ತೇನೆ. ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನಾನು ಕೊನೆ ಹಂತದಲ್ಲಿ ಭಾಗಿಯಾಗಿದ್ದೆ” ಎಂದರು.

“ಮಂಡ್ಯ ಸಕ್ಕರೆ ಕಾರ್ಖಾನೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಚಲುವರಾಯಸ್ವಾಮಿ ದೂರಿದ್ದಾರೆ. ನಾನು ಸಿಎಂ ಆಗಿದ್ದಾಗ ಕಾಂಗ್ರೆಸ್​​ನವರು ಕೆಲಸ ಮಾಡಲು ಬಿಡಲಿಲ್ಲ. ನಮ್ಮ ಕೊಡುಗೆ ಮಂಡ್ಯಗೆ ಏನೂ ಅಂತ ಜನ ನಿರ್ಧಾರ ಮಾಡುತ್ತಾರೆ. ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲ. ಸೋಮವಾರ ನಡೆದ ಅಹಿತಕರ ಘಟನೆಗೆ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಸರ್ಕಾರವೇ ಕಾರಣ. ಮೊದಲು ನಿಮ್ಮ ಮಂಡ್ಯ ಶಾಸಕರಿಗೆ ಯಾವ ರೀತಿ ನೆಡೆದುಕೊಳ್ಳಬೇಕು ಎಂದು ಪಾಠ ಮಾಡಿ” ಎಂದು ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments