ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಅವಧಿಯ ಅಂತ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ೫,೬೫೫ ಕೋಟಿ ರೂಗಳ ಮೊತ್ತದ ಬಾಕಿ ಕಾಮಗಾರಿಗಳಿದ್ದವು. ಆದರೆ, ಬಿಜೆಪಿ ಸರ್ಕಾರವು ತನ್ನ ಅವಧಿಯ ಅಂತ್ಯಕ್ಕೆ ಇದನ್ನು ೧೨,೭೨೯ ಕೋಟಿ ರೂಗಳಿಗೆ ಹೆಚ್ಚಿಸಿತ್ತು. ಹಾಗೆಯೇ ೨೦೧೭- ೧೮ ರಲ್ಲಿ ೪೪೦ ಕೋಟಿ ರೂಗಳ ಬಿಲ್ಲುಗಳು ಪಾವತಿಗೆ ಬಾಕಿ ಇದ್ದವು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಸುಮಾರು ೨,೦೦೦ ಕೋಟಿ ರೂಗಳಿಗೆ ಏರಿದೆ. ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧ ಎಂಬ ಅಂಶವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಕೆಸಿ ವ್ಯಾಲಿ ಮತ್ತು ಎಚ್‌ಎನ್ ವ್ಯಾಲಿ ಯೋಜನೆಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಚಾಲನೆ ನೀಡಿದ್ದು ಇದೇ ಹಿಂದಿನ ಸಿದ್ದರಾಮಯ್ಯ ಸರ್ಕಾರ. ಈ ಯೋಜನೆಯಿಂದ ಈ ಜಿಲ್ಲೆಗಳ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡು ರೈತರು ಸಂತಸಗೊಂಡಿದ್ದಾರೆ. ಹೀಗಾಗಿ ಪ್ರಸ್ತುತ ಎರಡನೇ ಹಂತದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ೨೯೬ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ೫೨೯ ಕೋಟಿ ರೂಗಳ ವೆಚ್ಚದಲ್ಲಿ ಅನುಷ್ಠಾನಗೊಳಿವುದಾಗಿ ಸರ್ಕಾರ ಘೋಷಿಸಿದೆ.
ಅಷ್ಟೇ ಅಲ್ಲ, ಕೆರೆಗಳ ಸುತ್ತ ಜೀವ ಪರಿಸರವನ್ನು ಉಳಿಸಿಕೊಂಡು ಅವುಗಳ ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಸರ್ಕಾರ ಹೊಸ ರೂಪ ನೀಡಲು ಮಂದಾಗಿದೆ. ಅದಕ್ಕಾಗಿ ಕೆರೆಗಳ ಬಳಕೆದಾರರ ಸಂಘಗಳನ್ನು ಬಲಿಷ್ಠಗೊಳಿಸಿ ಕೆರೆ ಅಭಿವೃದ್ಧಿಗೆ ಪಾಲುದಾರರನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದೆ. ಆ ಮೂಲಕ ಜಲ ಬಳಕೆ ಮಾಡಲು ಅರ್ಥಪೂರ್ಣ ಕ್ರಿಯೆ ಯೋಜನೆ ಸಿದ್ಧಪಡಿಸಲು ನಿರ್ಧರಿಸಿರುವುದು ಸದ್ಯದ ಮಟ್ಟಿಗೆ ಒಂದು ಒಳ್ಳೆಯ ಪ್ರಯತ್ನ. ಆ ಮೂಲಕ ಬಳಕೆದಾರರನ್ನೇ ಪಾಲದಾರರನ್ನಾಗಿ ಮಾಡಿಕೊಳ್ಳುವ ಮೂಲಕ ಅವರನ್ನು ಉತ್ತೇಜಿಸುವ ಸರ್ಕಾರದ ಈ ಕ್ರಮ ಸಕಾಲಿಕ.
ಒಟ್ಟಾರೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮೂಲಕ ರಾಜ್ಯದ ಜೀವನಾಡಿ ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ಚಿಂತನೆ ಸೂಕ್ತವಾಗಿದೆ.