ಕರ್ನಾಟಕ ಆಡಳಿತ ಸುಧಾರಣಾ ಆಯೋಗ – 2 ರ ಅಧ್ಯಕ್ಷ, ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹಾಗೂ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿಯಾಗಿ ಆರನೇ ವರದಿಯನ್ನು ಸಲ್ಲಿಸಿದರು.
ಆಯೋಗವು ತನ್ನ 6ನೇ ವರದಿಯಲ್ಲಿ 7 ಇಲಾಖೆಗಳನ್ನು ಅಧ್ಯಯನ ಮಾಡಿ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿದೆ. ಇದಲ್ಲದೇ, ಇತರ ಇಲಾಖೆಗಳಿಗೆ ಸಂಬಂಧಿಸಿದ ಸಾಮಾನ್ಯ ಶಿಫಾರಸ್ಸುಗಳನ್ನು ಸಹ ಮಾಡಿದೆ.
ಹಾಗೆಯೇ ಕೆಲವು ವಿಶಿಷ್ಟ ಕ್ಷೇತ್ರಗಳ ಬಗ್ಗೆ ಐಐಎಂ, ಬೆಂಗಳೂರು, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯೂನಿವರ್ಸಿಟಿ, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ, ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ, ಪಬ್ಲಿಕ್ ಅಫೇರ್ಸ್ ಸೆಂಟರ್, ಪಬ್ಲಿಕ್ ಅಫೇರ್ಸ್ ಫೌಂಡೇಶನ್ ವತಿಯಿಂದ ಅಧ್ಯಯನ ವರದಿಗಳನ್ನು ಪಡೆದು ಅವುಗಳ ಆಧಾರದ ಮೇಲೆ ಶಿಫಾರಸ್ಸುಗಳನ್ನು ಮಾಡಿದೆ.
6ನೇ ವರದಿಯಲ್ಲಿ 7 ಇಲಾಖೆಗಳನ್ನು ಅಧ್ಯಯನ ಮಾಡಿರುವ ಆಯೋಗ 882 ಶಿಫಾರಸ್ಸುಗಳನ್ನು ಸಲ್ಲಿಸಿದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 07-01- 2021ರಂದು ರಚನೆಯಾಗಿದೆ. ಆಯೋಗವು ಈಗಾಗಲೇ 5 ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಒಟ್ಟು 23 ಇಲಾಖೆಗಳಿಗೆ ಸಂಬಂಧಿಸಿದಂತೆ 3630 ಶಿಫಾರಸುಗಳನ್ನು ಮಾಡಿದೆ. 6ನೇ ವರದಿ ಮೂಲಕ 30 ಇಲಾಖೆಗಳ 4512 ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಮಾಡಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೇದ್ ಅಖ್ತರ್, ರಾಕೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.