ಇಂಗ್ಲಿಷ್ ನಾಮಫಲಕಗಳನ್ನು ಕಿತ್ತು ಮಸಿ ಬಳಿದು ನಡೆಸಿದ ಪ್ರತಿಭಟನೆ ಗಲಾಟೆ ಸಂಬಂಧಿಸಿ ಬಂಧಿತರಾದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಸೇರಿ 29 ಮಂದಿ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಪ್ರತಿಭಟನೆ ಗಲಭೆ ಸಂಬಂಧ ನಿನ್ನೆ ಸಂಜೆ ಬಂಧಿಸಲ್ಪಟ್ಟ ನಾರಾಯಣಗೌಡ ಸೇರಿ 29 ಮಂದಿ ಕಾರ್ಯಕರ್ತರನ್ನು ಮಧ್ಯರಾತ್ರಿ 1ರ ವೇಳೆಗೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು ನ್ಯಾಯಮೂರ್ತಿಗಳು ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಅದರಂತೆ ನಾರಾಯಣಗೌಡ ಸೇರಿ 14 ಮಂದಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಜೈಲಿಗೆ ಹಾಕಲು ಕರೆದುಕೊಂಡು ಹೋಗುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ನಾರಾಯಣಗೌಡರು, “ಇದೊಂದು ಮುಠ್ಠಾಳ ಸರ್ಕಾರ ಎಂದು ಆಕ್ರೋಶ” ವ್ಯಕ್ತಪಡಿಸಿದರು.
“ನಾರಾಯಣ ಗೌಡ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ಹೆದ್ದಾರಿ ತಡೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, (ಐಪಿಸಿ 353) ರಡಿ ಪ್ರಕರಣವನ್ನು ನಾರಾಯಣ ಗೌಡ ಸೇರಿ ಸಂಘಟನೆಯ ಇನ್ನಿತರ ಕಾರ್ಯಕರ್ತರ ಮೇಲೆ ದಾಖಲು ಮಾಡಿಕೊಳ್ಳಲಾಗಿದೆ. ನಾರಾಯಣಗೌಡರ ಜತೆ 29 ಮಂದಿಯನ್ನು ಜೈಲಿಗೆ ಹಾಕಲಾಗಿದೆ.
ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪ ದಾಖಲಾಗಿದೆ. ನಾರಾಯಣ ಗೌಡ ಸೇರಿ 6 ಮಂದಿ ವಿರುದ್ದ ಪಿಎಸ್ ಐ ಲಿತೀನ್ ದೂರಿನನ್ವಯ ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ನ್ಯಾಷನಲ್ ಹೈವೆ ಅಥಾರಿಟಿ ಆ್ಯಕ್ಟ್ ಐಪಿಸಿ 283, 188, 427, 341 ,188 283ರಡಿ ಎಫ್ಐಆರ್ ಮಾಡಲಾಗಿದೆ. ನಾರಾಯಣ ಗೌಡ ಎ1, ಜಗದೀಶ್ ಎ2, ಸುರೇಶ್ ಎ3, ಬಿ.ಕೆ.ನಾರಾಯಣ ಸ್ವಾಮಿ ಎ4, ಬಿ.ಟಿ .ಅನಿಲ್ ಕುಮಾರ್ ಎ5, ಅಂಬರೀಶ್ ಎ6 ಆಗಿದ್ದಾರೆ.
ಹೋರಾಟ ನಡೆಸಿದ ನಾರಾಯಣ ಗೌಡ ಹಾಗೂ ಸಂಗಡಿಗರನ್ನು ನಿನ್ನೆ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಇಂದು ನಸುಕಿನ ಜಾವ ನಾರಾಯಣ ಗೌಡ ಸೇರಿದಂತೆ 29 ಮಂದಿಯನ್ನು ದೇವನಹಳ್ಳಿಯಲ್ಲಿರುವ ನಿವಾಸಕ್ಕೆ ಹಾಜರುಪಡಿಸಲಾಯಿತು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶ ಹೊರಡಿಸಿದರು.
ನಾರಾಯಣಗೌಡ ಹಾಗೂ ಸಂಗಡಿಗರನ್ನು ಭಾರಿ ಬಿಗಿ ಭದ್ರತೆ ನಡುವೆ ಪೊಲೀಸರು ಕೊಂಡೊಯ್ದಿದ್ದಾರೆ. ಇದಕ್ಕೂ ಮುನ್ನ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಮೆಡಿಕಲ್ ಟೆಸ್ಟ್‌ಗೆ ಕರೆದೊಯ್ಯುವಾಗ ಕರವೇ ಕಾರ್ಯಕರ್ತರು ಬಸ್ ತಡೆದು ಬಸ್‌ಗೆ ಕಲ್ಲು ತೂರಾಟ ನಡೆಸಿದರು. ಬಸ್ಸಿಗೆ ಕಲ್ಲು ತೂರುವಾಗ ಪೊಲೀಸರೊಬ್ಬರಿಗೆ ಕಲ್ಲೇಟು ಬಿದ್ದು ಗಾಯವಾಗಿದೆ.