ಏಳು ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ಬಿಜೆಪಿಯವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿಯೇ ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, “1.40 ಸಾವಿರ ಕೋಟಿ ನಮ್ಮಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಹೋಗುತ್ತದೆ. 100 ರೂ.ತೆರಿಗೆ ಕೊಟ್ಟರೆ ನಮಗೆ 12 ರೂ.ಗಳು ಮಾತ್ರ ಕೇಂದ್ರದಿಂದ ತೆರಿಗೆ ಬರುತ್ತಿದೆ. ಇದನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಗೆ ನಾಚಿಕೆಯಾಗಬೇಕು” ಎಂದರು.
“14ನೇ ಹಣಕಾಸು ಆಯೋಗದಲ್ಲಿ 4.7 % ಹಾಗೂ 15 ನೇ ಹಣಕಾಸು ಆಯೋಗದಲ್ಲಿ 3.64 % ರಾಜ್ಯಕ್ಕೆ ನಿಗಡಿಯಾಗಿ ಶೇ 1.07% ರಷ್ಟು ಕಡಿಮೆಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ 2 ನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿದೆ. ಕೇಂದ್ರದ ಅನ್ಯಾಯವನ್ನು ಬೆಂಬಲಿಸುವ ಬಿಜೆಪಿಗೆ ಕನ್ನಡಿಗರ ಬಗ್ಗೆ ಕಾಳಜಿ ಇದೆಯೇ?” ಎಂದು ಕೇಳಿದರು.
ಇದೇ ವೇಳೆಗೆ ಮೋದಿ ಮೋದಿ, ಜೈ ಶ್ರೀ ರಾಮ್ ಎಂದು ಕೂಗು ಹಾಕುತ್ತಿದ್ದ ವಿರೋಧಪಕ್ಷದವರನ್ನು ಉದ್ದೇಶಿಸಿ, “ನಿಮ್ಮದು ಕೇವಲ ನಿಶಕ್ತಿ. ಮೋದಿ ಹೆಸರಿನ ಮೇಲೆ ನಡೆಸುತ್ತಿದ್ದೀರಿ. ಸಮಾಜ ಒಡೆಯುವ ಕೆಲ್ಸ ನಿಮ್ಮದು. ನಾವು ಜೈ ಸೀತಾ ರಾಮ್ ಎನ್ನುತ್ತೇವೆ” ಎಂದು ಮುಖ್ಯ ಮಂತ್ರಿಗಳು ಘೋಷಣೆ ಕೂಗಿದರು.
“ಬಿಜೆಪಿ ಗೆ ತಲೆ ಖಾಲಿ, ಮೆದುಳು ಇಲ್ಲ. ರಾಮಾಯಾಣ ಮಹಾಭಾರತ ಓದಿಕೊಂಡೇ ಇಲ್ಲ. 15ನೇ ಹಣಕಾಸು ಆಯೋಗ ಬಂದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಮಗೆ ದೊಡ್ಡ ಅನ್ಯಾಯ ಆಯಿತು. ನಾನು 14 ನೇ ಹಣಕಾಸು ಆಯೋಗದಲ್ಲಿ ಮುಖ್ಯಮಂತ್ರಿ ಆಗಿದ್ದೆ. ನಮಗೆ ಇಷ್ಟೊಂದು ಅನ್ಯಾಯ ಆಗಲಿಲ್ಲ” ಎಂದರು.
ಬೆಲೆ ಏರಿಕೆ, ಸಂಕಷ್ಟಕ್ಕೆ ಗ್ಯಾರಂಟಿ ಉತ್ತರ
“ಸಬ್ ಕಾ ಸಾಥ್ ಎಂದವರು ಪೆಟ್ರೋಲ್ ಡೀಸೆಲ್ ಬೆಲೆ, ಗ್ಯಾಸ್ ಬೆಲೆ, ಅಗತ್ಯವಸ್ತುಗಳ ಬೆಲೆ ಏರಿಸಿದರು. ಬಡವರಿಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ನಾಲ್ಕರಿಂದ ಐದು ಸಾವಿರ ರೂ. ಕೊಡ್ತಾ ಇದ್ದೀವಿ. 1.2 ಕೋಟಿ ರೂ. ಕುಟುಂಬಗಳು ಅಂದರೆ ಸುಮಾರು 4.5 ಕೋಟಿ ಜನರಿಗೆ ಕೊಡ್ತಾ ಇದ್ದೀವಿ. ಈಗ ಅವರು ನಮ್ಮನ್ನು ಕಾಪಿ ಮಾಡುತ್ತಿದ್ಧಾರೆ” ಎಂದು ಹೇಳಿದರು.
“ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗಲೂ ಸಂಘ ಪರಿವಾರದ ಹೆಡಗೇವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಪಾಲ್ಗೊಂಡಿಲ್ಲ. ಬಿಜೆಪಿ ಯಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿಯವರು” ಎಂದು ಕಿಡಿಕಾರಿದರು.
“ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಕಾಂಗ್ರೆಸ್ ಪರವಾಗಿದ್ದುದ್ದನ್ನು ಮರೆ ಮಾಚಲು ವಿಧಾನ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ. ಪೈಪೋಟಿಗೆ ಬಿದ್ದಂತೆ ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ. ಜೆಡಿಎಸ್ ತಮ್ಮ ಪಕ್ಷದ ಹೆಸರಿನಲ್ಲಿರುವ “ಎಸ್” ನ್ನು ತೆಗೆದುಹಾಕುವುದು ಉತ್ತಮ. ಏಕೆಂದರೆ ಅದು ಈಗ ಜಾತ್ಯತೀತ ವಾಗಿ ಉಳಿದಿಲ್ಲ” ಎಂದು ಕುಟುಕಿದರು.