ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜೊತೆ ಲೈಂಗಿಕ ಸಂಪರ್ಕ ನಡೆಸಿ ವಂಚಿಸಿರುವ ಭಾರತೀಯ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ಅವರ ಮೇಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2021ನೇ ಸಾಲಿನ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ವರುಣ್ ಕುಮಾರ್ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
2019ರಲ್ಲಿ ಯುವತಿಯು ತಾನು 17ನೇ ವಯಸ್ಸಿನಲ್ಲಿರುವಾಗಲೇ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವುದಾಗಿ ಆರೋಪ ಮಾಡಿದ್ದಾರೆ.
ದೂರುದಾರ ಯುವತಿಯು 2016-17ನೇ ಸಾಲಿನಲ್ಲಿ ನ್ಯಾಷನಲ್ ಸೆಂಟರ್ ಆಗಿ ಎಕ್ಸಿಲೆನ್ಸ್ನಿಂದ ವಾಲಿಬಾಲ್ ಕ್ರೀಡೆಯಲ್ಲಿ ಆಯ್ಕೆಯಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದಕ್ಷಿಣ ವಿಭಾಗದ ತರಬೇತಿ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಸ್ಟೆಲ್ನಲ್ಲಿ ತಂಗಿದ್ದರು, ಅಪ್ರಾಪ್ತೆಯಾಗಿದ್ದ ಯುವತಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಆಟಗಾರ ವರುಣ್ ಕುಮಾರ್ 17 ವರ್ಷದವಳಾಗಿದ್ದ ದೂರುದಾರಳನ್ನು ಪ್ರೀತಿಸುವುದಾಗಿ ‘ನಿನ್ನ ಮನೆಯವರನ್ನ ಒಪ್ಪಿಸಿ ಮದುವೆಯಾಗುವೆ ಅಲ್ಲಿಯವರೆಗೂ ಪ್ರೇಮಿಗಳಾಗಿ ಇರೋಣ’ ಎಂದು ನಂಬಿಸಿದ್ದರು.
“ಆತನ ಮಾತು ಕೊಟ್ಟು ದೈಹಿಕ ಸಂಪರ್ಕ ಮಾಡಿದ್ದು ಈಗ ಮದುವೆಯಾಗದೇ ವಂಚನೆ ಮಾಡಿದ್ದಾನೆ. 2019ರಲ್ಲಿ ರಾತ್ರಿ ಊಟದ ನೆಪದಲ್ಲಿ ಜಯನಗರಕ್ಕೆ ಕರೆದೊಯ್ದು ಬಲವಂತವಾಗಿ ದೈಹಿಕ ಸಂಪರ್ಕ ಬೆಳಸಿ ಬಳಿಕ ನಿರಂತರ ಐದು ವರ್ಷಗಳ ಕಾಲ ಮದುವೆಯಾಗುವುದಾಗಿ ನಂಬಿಸಿ ಆಗಾಗ ದೈಹಿಕ ಸಂಪರ್ಕ ಮಾಡಿದ್ದು, ಒಂದು ವರ್ಷದ ಹಿಂದೆ ನನ್ನ ತಂದೆ ಮೃತಪಟ್ಟಾಗ ಮನೆಗೆ ಬಂದು ಸಾಂತ್ವನ ಹೇಳಿ ಹೋಗಿದ್ದ ಆತ ಈಗ ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದಾನೆ” ಎಂದು ಯುವತಿ ಆರೋಪಿಸಿದ್ದಾಳೆ.
ಯಾರು ಈ ವರುಣ್ ಕುಮಾರ್
ಭಾರತ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ಮೂಲತಃ ಹಿಮಾಚಲ ಪ್ರದೇಶದವನು. ಹಾಕಿಗಾಗಿಯೇ ಪಂಜಾಬ್ ಗೆ ಶಿಫ್ಟ್ ಆಗಿದ್ದರು. 2017ರಲ್ಲಿ ಭಾರತ ತಂಡದ ಪರ ಪಾದಾರ್ಪಣೆ ಮಾಡಿದ್ದರು. 2022ರ ಬರ್ಮಿಂಗ್ ಹ್ಯಾಂ – ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022 ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. 2020 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯ. ಕಂಚಿನ ಸಾಧನೆ ಬಳಿಕ ವರುಣ್ ಕುಮಾರ್ಗೆ ಹಿಮಾಚಲ ಪ್ರದೇಶ ಸರ್ಕಾರ 1 ಕೋಟಿ ಬಹುಮಾನ ಘೋಷಿಸಿತ್ತು. 2021ನೇ ಸಾಲಿನ ಅರ್ಜುನ ಪ್ರಶಸ್ತಿಗೂ ವರುಣ್ ಕುಮಾರ್ ಭಾಜನರಾಗಿದ್ದಾರೆ.