ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಕನ್ನಡ ಚಿತ್ರರಂಗಕ್ಕೆ ಭವ್ಯ ಇತಿಹಾಸವಿದೆ. ಗಟ್ಟಿ ಅಡಿಪಾಯವಿದೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಇದು ಇನ್ನಷ್ಟು ಭದ್ರವಾಗಬೇಕಾದರೆ ಹೆಚ್ಚೆಚ್ಚು ಸಿನಿಮಾಗಳು ಬರಬೇಕು. ಆ ಶ್ರೇಷ್ಠ ನಟರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಪ್ರತಿಪಾದಿಸಿದರು.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕರಾಗಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಮಾತೃಭಾಷೆಯ ಸಿನಿಮಾಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಡಬ್ಬಿಂಗ್ ಸಿನಿಮಾಗಳನ್ನು ಜನ ನೋಡುತ್ತಿದ್ದಾರೆ. ನಮ್ಮಲ್ಲಿ ಉತ್ತಮ ನಿರ್ದೇಶಕರು, ಉತ್ತಮ ಕಥೆಗಳು ಲಭ್ಯ ಇರುವುದರಿಂದ ನಮ್ಮವೇ ಚಿತ್ರಗಳು ದೊಡ್ಡ ಸಂಖ್ಯೆಯಲ್ಲಿ ಬರಲಿ ಎನ್ನುವುದು ನನ್ನ ಆಶಯ ಎಂದು ಸಚಿವರು ಹೇಳಿದರು.
ಇವತ್ತು ಕನ್ನಡ ಚಿತ್ರರಂಗ ಎತ್ತರದ ಸಾಧನೆಗಳನ್ನು ಮಾಡುತ್ತಿದೆ. ಉತ್ತಮ ಸಿನಿಮಾಗಳು ಬರುತ್ತಿವೆ. ಭಾರತೀಯ ಚಿತ್ರರಂಗ ನಮ್ಮನ್ನು ಬೆರಗಿನಿಂದ ನೋಡುತ್ತಿದೆ. ಆದರೂ ಕನ್ನಡ ಚಿತ್ರಗಳು ಇನ್ನು ಹೆಚ್ಚಿನ ಸಂಖೆಯಲ್ಲಿ ಯಶಸ್ಸು ಸಾಧಿಸಬೇಕು ಹಾಗೂ ನಿರ್ಮಾಪಕರು ಉತ್ತಮ ಚಿತ್ರಗಳನ್ನು ನಿರ್ಮಿಸಲು ಅವಕಾಶ ಆಗಬೇಕು ಎಂದು ಕುಮಾರಸ್ವಾಮಿ ಅವರು ನುಡಿದರು.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು; ನಿರ್ದೇಶಕರಾಗಿ, ನಿರ್ಮಾಪಕರಾಗಿ ಐದು ದಶಕಗಳ ಕಾಲ ನಿಲ್ಲುವುದು ಸುಲಭದ ಮಾತಲ್ಲ. ತಮ್ಮ ಇಡೀ ಕುಟುಂಬವನ್ನೇ ಚಿತ್ರರಂಗಕ್ಕೆ ಸಮರ್ಪಣೆ ಮಾಡಿಕೊಂಡ ಕುಟುಂಬ ಅವರದ್ದು. ನಾನು ಚಿತ್ರ ಪ್ರದರ್ಶಕನಾಗಿ, ಹಂಚಿಕೆದಾರನಾಗಿ ಹಾಗೂ ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ. ರಾಜೇಂದ್ರ ಸಿಂಗ್ ಬಾಬು ಅವರ ಚಿತ್ರಗಳನ್ನು ನಾನು ಹಂಚಿಕೆ ಮಾಡಿ ಪ್ರದರ್ಶಿಸಿದ್ದೇನೆ ಎಂದು ನೆನಪು ಮಾಡಿಕೊಂಡರು.
ಉತ್ತಮ ಕಥೆಗಳು, ಅಂದರೆ ಕಾದಂಬರಿ ಆಧರಿತ ಚಿತ್ರಗಳನ್ನು ನಿರ್ದೇಹಿಸುತ್ತಿದ್ದ ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ ಅವರ ಸಾಲಿಗೆ ಸೇರುವಂತಹ ನಿರ್ದೇಶಕರು ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಸಿ.ಎನ್ ಅಶ್ವತ್ಥನಾರಾಯಣ, ಮಾಜಿ ಸಚಿವ ಮುನಿರತ್ನ, ನಾಯಕ ನಟರಾದ ಕಿಚ್ಚ ಸುದೀಪ್, ಬ್ರಹ್ಮಾಂಡ ಗುರೂಜಿ, ರಾಕ್ ಲೈನ್ ವೆಂಕಟೇಶ್, ಬಸಂತ ಕುಮಾರ್ ಪಾಟೀಲ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.