ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಶನಿವಾರ ಬೆಳಿಗ್ಗೆ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ದಾಳಿ ನಡೆಸಿ ಪೊಲೀಸರು ಆರೋಪಿಯೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿರುವುದನ್ನು ಬಯಲಿಗೆಳೆದಿದ್ದಾರೆ.
ಕಳೆದ 2023ರಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದ ಆರೋಪಿಯನ್ನು ಬಂಧಿಸಿ ಮನೆಯವರಿಗೂ ಮಾಹಿತಿ ನೀಡದೇ ಫೆ.1ರಿಂದ 10 ದಿನಗಳ ಕಾಲ ಅಕ್ರಮ ಬಂಧನದಲ್ಲಿಡಲಾಗಿದ್ದು, ಆರೋಪಿಯ ಕುಟುಂಬಸ್ಥರ ದೂರಿನ ಮೇರೆಗೆ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ದಾಳಿ ನಡೆಸಿದಾಗ ಅಕ್ರಮ ಬಂಧನ ಪತ್ತೆಯಾಗಿದೆ.
ಮಾನವ ಹಕ್ಕುಗಳ ಆಯೋಗದ ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡ ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಮೃತಹಳ್ಳಿ ಠಾಣೆ ಮೇಲೆ ದಾಳಿ ನಡೆಸಿದಾಗ ಆರೋಪಿ ಯಾಸಿನ್ ಮೆಹಬೂಬ್ ಖಾನ್ ನನ್ನು ಕಳೆದ ಫೆ.1ರಿಂದ 10 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟಿರುವುದು ಬೆಳಕಿಗೆ ಬಂದಿದೆ.
2023ರಲ್ಲಿ ಯಾಸಿನ್ ಖಾನ್ ವಿರುದ್ಧ ಕಳ್ಳತನ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾದ ಬಳಿಕ ಆರೋಪಿ ಯಾಸಿನ್ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ. ಆರೋಪಿ ಬಂಧನಕ್ಕೆ ಕೋರ್ಟ್ ವಾರೆಂಟ್ ಜಾರಿ ಮಾಡಿತ್ತು. ವಾರೆಂಟ್ ಆಧರಿಸಿ ಪೊಲೀಸರು ಮುಂಬಯಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.
ಮಾನವ ಹಕ್ಕುಗಳ ಆಯೋಗ ದಾಳಿ ನಡೆಸಿದ ವೇಳೆ ಠಾಣೆಯ ದಾಖಲಾತಿಯಲ್ಲಿ ಆರೋಪಿ ಯಾಸಿನ್ ಖಾನ್ ವಶಕ್ಕೆ ಪಡೆದಿದ್ದ ಬಗ್ಗೆ ದಾಖಲಾತಿಯಲ್ಲಿ ಉಲ್ಲೇಖಿಸಿರಲಿಲ್ಲ. ಆರೋಪಿಯ ಕುಟುಂಬಸ್ಥರಿಗೂ ವಶಕ್ಕೆ ಪಡೆದಿದ್ದ ಬಗ್ಗೆ ತಿಳಿಸಿರಲಿಲ್ಲ. ಹೀಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ಆರೋಪಿಯ ಕುಟುಂಬ ದೂರು ನೀಡಿತ್ತು. ದೂರು ಆಧರಿಸಿ ಆಯೋಗದ ಡಿವೈಎಸ್ ಪಿ ನೇತೃತ್ವದ ತಂಡ ಠಾಣೆ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಆರೋಪಿಯನ್ನು ಅಕ್ರಮವಾಗಿ ಠಾಣೆಯಲ್ಲಿಟ್ಟಿದ್ದು ಬಯಲಾಗಿದೆ.
ಸದ್ಯ ಈಗ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಸದ್ಯ ಅಧಿಕಾರಿಗಳು ಇನ್ಸ್ಪೆಕ್ಟರ್, ಸಿಬ್ಬಂದಿ ವಿಚಾರಣೆ ಮಾಡುತ್ತಿದ್ದಾರೆ.
ಅಮೃತಹಳ್ಳಿ ಠಾಣೆಯ ಕ್ರೈಂ ಪೊಲೀಸರು ಆರೋಪಿಯನ್ನ ಫೆ.1ರಂದು ಎನ್ ಬಿಡಬ್ಲ್ಯೂ ಸಂಬಂಧ ಕರೆತಂದಿದ್ದು, ಆದರೆ ಆರೋಪಿ ಬಂಧನದ ಬಗ್ಗೆ ರಿಜಿಸ್ಟರ್ ನಲ್ಲೂ ದಾಖಲಿಸಿಲ್ಲ ಮತ್ತು ಕೋರ್ಟ್‌ಗೂ ಹಾಜರು ಪಡಿಸಿಲ್ಲ.
ಈ ವೇಳೆ ಕೇಸ್ ಸಂಬಂಧ ವಕೀಲ ಮಜೀದ್ ಠಾಣೆಗೆ ಭೇಟಿ ಕೊಟ್ಟಿದ್ದರು. ಆರೋಪಿ ತನ್ನ ಬಂಧನದ ಬಗ್ಗೆ ಸೂಕ್ಷವಾಗಿ ವಕೀಲರಿಗೆ ತಿಳಿಸಿದ್ದರು, ಬಳಿಕ ವಕೀಲ ಮಜೀದ್ ಅಸ್ಲಾಂ ಕುಟುಂಬ ಮತ್ತು ಮಾನವ ಹಕ್ಕುಗಳಿಗೆ ಮಾಹಿತಿ ನೀಡಿದ್ದನ್ನು ಆಧರಿಸಿ ಮಾನವ ಹಕ್ಕುಗಳು ಆಯೋಗದ ಸುದೀರ್ ಹೆಗ್ಡೆ ನೇತೃತ್ವದಲ್ಲಿ ಅಧಿಕಾರಿಗಳ ದಾಳಿ ನಡೆದಿದೆ.