ಫಕೀರ ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳುವಳಿಕೆಯಾಗಿದ್ದರೆ ಬಗೆಹರಿಸುತ್ತೇವೆ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೇಳಲು ನಾನು ಹಿಂಜರಿಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಪ್ರಲ್ಹಾದ್ ಜೋಶಿ ಲಿಂಗಾಯತರನ್ನು ತುಳಿದಿದ್ದಾರೆ ಅನ್ನೋ ದಿಂಗಾಲೇಶ್ವರ ಸ್ವಾಮೀಜಿ ಆರೋಪದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಏನಾದರೂ ತಪ್ಪು ಮಾಡಿದ್ದರೆ ನೇರವಾಗಿ ಹೇಳಲಿ ಕ್ಷಮೆ ಕೇಳುತ್ತೇನೆ, ಸ್ವಾಮೀಜಿ ಏನು ಹೇಳಿದರೂ ನನಗೆ ಆಶಿರ್ವಾದ. ಈ ಸಂದರ್ಭದಲ್ಲಿ ನಾನು ಹೆಚ್ಚೇನೂ ಮಾತಾಡಲ್ಲ. ಸ್ವಾಮೀಜಿ ಸಮಯ ಕೊಟ್ಟರೆ ಅವರ ಜೊತೆ ಮಾತನಾಡಲು ನಾನು ಸಿದ್ಧ” ಎಂದು ಹೇಳಿದರು.
“ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಬೇಜಾರಾಗುವಂತೆ ನಾನು ನಡೆದುಕೊಂಡಿಲ್ಲ. ನಾನು ಲೋಕಸಭಾ ಸದಸ್ಯನಾದ ಮೇಲೆ ಕ್ಷೇತ್ರದಲ್ಲಿ ಎಂಟರಲ್ಲಿ ಏಳು ಜನ ಲಿಂಗಾಯತರಿಗೆ ಟಿಕೆಟ್ ಕೊಡಲಾಗಿದೆ. ಎಲ್ಲಾ ಸಮುದಾಯಕ್ಕೂ ನಾವು ಅವಕಾಶ ಕೊಟ್ಟಿದ್ದೇವೆ” ಎಂದರು.
ದಿಂಗಾಲೇಶ್ವರ ಸ್ವಾಮೀಜಿ ಮಾಡಿದ್ದ ಆರೋಪವೇನು?
“ಬಹುಸಂಖ್ಯಾತ ಲಿಂಗಾಯತ ನಾಯಕರು ತುಳಿತಕ್ಕೊಳಗಾಗಿದ್ದಾರೆ. ಮಹಿಳಾ ಜನಪ್ರತಿನಿಧಿಗಳು ಅವಮಾನಕ್ಕೆ ಒಳಗಾಗಿದ್ದಾರೆ. ಪ್ರಲ್ಹಾದ್ ಜೋಶಿಯವರಿಂದ ವೀರಶೈವ ಲಿಂಗಾಯತ ನಾಯಕರಿಗೆ ಅನ್ಯಾಯವಾಗಿದ್ದು, ಲಿಂಗಾಯತರಿಂದ ಆರಿಸಿ ಬಂದಿರುವ ಇವರು ಲಿಂಗಾಯತ ನಾಯಕ ಬೇಕು ಎಂಬ ಹಿನ್ನೆಲೆಯಲ್ಲಿ ಇಂದು ತೀರ್ಮಾನ ಕೈಗೊಳ್ಳಲಾಗಿದ್ದು, ನಮ್ಮ ಸಮಾಜದ ಮೇಲೆ ಚುನಾವಣೆ ಬಂದಾಗ ಮಾತ್ರ ಇವರಿಗೆ ಪ್ರೀತಿ ಯಾಕೆ ಬರುತ್ತದೆ? ಇವರಿಗೆ ಅಧಿಕಾರದ ಮದ ಬಂದಿದೆ. ಧಾರವಾಡ ಮತ ಕ್ಷೇತ್ರದಿಂದ ಜೋಶಿಯವರನ್ನು ದಿ. 31ರೊಳಗೆ ಬದಲಾವಣೆ ಮಾಡದಿದ್ದಲ್ಲಿ ಏ.2 ರಂದು ಮಠಾಧಿಪತಿಗಳು ಮತ್ತೆ ಸಭೆ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.