ನನ್ನನ್ನು ಹೊರಗಿನವನು ಎಂದು ಕರೆಯುವ ನೈತಿಕ ಹಕ್ಕು ಕಾಂಗ್ರೆಸ್ಸಿಗರಿಗಿಲ್ಲ. ರಾಹುಲ್ ಗಾಂಧಿ ಕೇರಳದ ವಯ್ನಾಡ್ನಿಂದ ಲೋಕಸಭೆಗೆ ಸ್ಪರ್ಧಿಸಿದ್ದು, ಅವರು ಕ್ಷೇತ್ರದ ಹೊರಗಿನವರಲ್ಲವೇ? ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ತಿರುಗೇಟು ನೀಡಿದರು.
ಬೆಳಗಾವಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಬೆಳಗಾವಿಯಲ್ಲಿನ ಸಮಸ್ಯೆಗಳಿಗೆ ನಾಯಕರು ತೆರೆ ಎಳೆದಿದ್ದಾರೆ. ಜಿಲ್ಲೆಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ಲೋಕಸಭೆ ಚುನಾವಣೆ ಗೆಲುವಿಗೆ ಸಿದ್ಧತೆ ನಡೆಸಿದ್ದೇನೆ” ಎಂದರು.
“30 ವರ್ಷಗಳಿಂದ ಬೆಳಗಾವಿ ಜಿಲ್ಲೆಯೊಂದಿಗೆ ಹೊಂದಿದ ಒಡನಾಟ ಮತ್ತು ಅನುಭವ ಪರಿಗಣಿಸಿ, ಪಕ್ಷದ ಹೈಕಮಾಂಡ್ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದೆ. ಜನಸಂಘದ ದಿನಗಳಿಂದಲೂ ನನ್ನ ಕುಟುಂಬ ಬಿಜೆಪಿಯೊಂದಿಗೆ ಸಂಬಂಧ ಹೊಂದಿದೆ” ಎಂದು ಹೇಳಿದರು.
“ನಾನು ಬಿಜೆಪಿ ತೊರೆದು ಅಲ್ಪಾವಧಿಗೆ ಕಾಂಗ್ರೆಸ್ ಸೇರಿದ್ದೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆಹ್ವಾನದ ಮೇರೆಗೆ ಹಿಂತಿರುಗಿದ್ದೇನೆ. ಬೆಳಗಾವಿ ನನಗೆ ಹೊಸತಲ್ಲ. ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿದ್ದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ” ಎಂದು ತಿಳಿಸಿದರು.
“ಬೆಳಗಾವಿಗೆ ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಕೊರೊನಾ, ನೆರೆ ಸಂಕಟದ ವೇಳೆ, ಜನರಿಗೆ ಸ್ಪಂದಿಸಿದ್ದೇನೆ. ಹುಬ್ಬಳ್ಳಿ ಜನ್ಮಭೂಮಿಯಾದರೆ, ಬೆಳಗಾವಿ ನನ್ನ ಕರ್ಮಭೂಮಿ. ಇಲ್ಲಿಯೇ ಮನೆ ಮಾಡಿಕೊಂಡು ವಾಸವಿರುತ್ತೇನೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ” ಎಂದು ಹೇಳಿದರು.