“ಮಿಸ್ಟರ್ ಕುಮಾರಸ್ವಾಮಿ, ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ. ಚರ್ಚೆ ಮಾಡಲು ಸದನಕ್ಕೆ ಬಾ. ನೀನು ಎಂತ ಸುಳ್ಳುಗಾರ ಎಂಬುದು ಗೊತ್ತಾಗಲಿದೆ” ಎಂದು ಏಕವಚನದಲ್ಲೇ ದಾಳಿ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಂಗಳವಾರ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಡಿಕೆ ಶಿವಕುಮಾರ್ ಮಹಿಳೆಯನ್ನು ಅಪಹರಿಸಿ, ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಆ ಘಟನೆ ನಡೆದದ್ದು 1996-97 ರಲ್ಲಿ. ಅದರ ದಾಖಲೆಗಳು ನನ್ನ ಬಳಿ ಇವೆ” ಎಂದಿದ್ದಾರೆ.
“ಒಂದು ಮಗುವನ್ನು ಕಿಡ್ನಾಪ್ ಮಾಡಿ ಕರೆದುಕೊಂಡು ಏನು ಮಾಡಿದ್ದಿರಿ? ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಜಮೀನು ಬರೆಸಿಕೊಳ್ಳಲು ಏನು ಮಾಡಿದ್ದಿರಿ? ಚೆಕ್ ಕೊಟ್ಟಿರುವುದು ಬೇಕಾ? ಎಲ್ಲ ದಾಖಲೆ ಇದೆ. ನಿನ್ನೆ ಮೊದಲ ಬಾರಿಗೆ ಇದನ್ನ ಹೇಳಿದ್ದೆ. ಅದಕ್ಕೆ ಚರ್ಚೆಗೆ ಕರೆಯುತ್ತಾರೆ. ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ, ಕಂತೆ ಗಟ್ಟಲೇ ದಾಖಲೆ ಇಟ್ಟು ಮಾತನಾಡುವೆ” ಎಂದು ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದ್ದಾರೆ.
“ಈಗ ಶಾಂತಿನಗರ ಹೌಸಿಂಗ್ ಸೊಸೈಟಿ, ಡೂಪ್ಲಿಕೇಟ್ ಸೊಸೈಟಿನ ಒರಿಜಿನಲ್ ಮಾಡಿಕೊಳ್ಳಲಿಲ್ವಾ? ಈ ದೇಶದಲ್ಲಿನ ಸಂಸ್ಥೆಗಳನ್ನು ದುಡ್ಡಿನಲ್ಲಿ ಕೊಂಡುಕೊಂಡು ಯಾವಾಗ ಏನು ಬೇಕಾದ್ರು ಮಾಡುವ ವ್ಯಕ್ತಿ ಡಿಕೆ ಶಿವಕುಮಾರ್” ಎಂದು ಆರೋಪಿಸಿದರು.
ಒಕ್ಕಲಿಗ ನಾಯಕತ್ವ ನಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆನಾ? ಡಿಕೆಶಿ ಸತ್ಯ ಹರಿಶ್ಚಂದ್ರ ಮೊಮ್ಮಗ. ದೊಡ್ಡ ಆಲಹಳ್ಳಿಯಲ್ಲಿ ಹುಟ್ಟುವಾಗ ಸತ್ಯ ಹರಿಶ್ಚಂದ್ರ ಬಂದು ನೀನು ಸತ್ಯನೇ ನುಡಿಬೇಕು ಎಂದು ಅವರಲ್ಲಿ ಹೇಳಿ ಹೋಗಿದ್ದಾರೆ. ನಮಗೆ ಸುಳ್ಳು ಹೇಳಿ ಎಂದು ಹೇಳಿದ್ದಾರೆ” ಎಂದು ಲೇವಡಿ ಮಾಡಿದರು.