ಎಂಎಲ್‌ಸಿ ಸೂರಜ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟ ಹಾಗೆ ಇನ್ನೂ ದೂರು ದಾಖಲಾಗಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ನೋಡಿದ್ದೇನೆ. ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ನನಗೆ ಯಾವುದೇ ಪತ್ರ ಬಂದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿರುವ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮಗೆ ಯಾರೂ ಅಧಿಕೃತ ದೂರು ನೀಡಿಲ್ಲ. ದೂರು ಬಂದ ಕೂಡಲೇ ನಾವು ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.
“ಪ್ರಕರಣ ಏನು ಎಂಬುದಾಗಿ ತಿಳಿದುಕೊಂಡು ನಾವು ತನಿಖೆ ಮಾಡುತ್ತೇವೆ. ತನಿಖೆಯನ್ನು ಸಿಐಡಿಗೆ ಕೊಡುವ ಮುನ್ನ ನೈಜತೆ ತಿಳಿದುಕೊಳ್ಳುತ್ತೇವೆ. ಅಧಿಕೃತ ದೂರು ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದರು.
ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ಜೈಲಿನಲ್ಲಿದ್ದಾರೆ. ಈ ಸಂದರ್ಭದಲ್ಲಿಯೇ ಅವರ ಸಹೋದರ ಸೂರಜ್ ವಿರುದ್ಧವೂ ಆರೋಪ ಕೇಳಿಬಂದಿದೆ.
ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ ಆರೋಪ ಮಾಡಿ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತ ದೂರು ನೀಡಿದ್ದರು. ಆದರೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.