ಚಿಕ್ಕಮಗಳೂರಿನ ಹಿರೇಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನ ವಾಪಸ್ ಕೇಳಿ ನೋಟಿಸ್ ನೀಡಿರುವ ಪ್ರಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಅವರು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿ, ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರ್ ಅವರದ್ದೇ ತಪ್ಪೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
“ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಾಸು ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು, ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿರೇಮಗಳೂರು ಕಣ್ಣನ್ ಅವರು ಕಳೆದ 44 ವರ್ಷಗಳಿಂದ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡದಲ್ಲೇ ಮಂತ್ರ ಪಠಣ ಮಾಡಿ ಅರ್ಚನೆ ಮಾಡುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದ ಹಿರೇಮಗಳೂರು ಕಣ್ಣನ್ ಅವರಿಗೆ ಜಿಲ್ಲಾಡಳಿತ ವೇತನ ವಾಪಸ್ ಕೇಳಿ ನೋಟಿಸ್ ಜಾರಿ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಲು ಆರಂಭವಾಗಿತ್ತು.
2013-14ರಿಂದ 2016-17ರವರೆಗೆ ವಾರ್ಷಿಕ 24 ಸಾವಿರ ರೂ ಅರ್ಚಕರಿಗೆ ಪಾವತಿಸಬೇಕಿತ್ತು. ಆದರೆ ತಪ್ಪಾಗಿ 90 ಸಾವಿರದಂತೆ ಹೆಚ್ಚುವರಿಯಾಗಿ ವಾರ್ಷಿಕವಾಗಿ 66 ಸಾವಿರ ಪಾವತಿಯಾಗಿದೆ. ಹಾಗೂ 2017-18ರಿಂದ 2021-22ನೇ ಸಾಲಿನವರೆಗೆ ವಾರ್ಷಿಕವಾಗಿ 48 ಸಾವಿರ ಪಾವತಿಸಬೇಕಿದ್ದು, ತಪ್ಪಾಗಿ 90 ಸಾವಿರ ರೂ ಪಾವತಿಸಲಾಗಿದೆ.
ಈ ಹೆಚ್ಚುವರಿಯಾಗಿ ಪಾವತಿಸಲಾದ 4,74 ಲಕ್ಷ ದೇವಾಲಯ ನಿಧಿಗೆ ಪಾವತಿಸುವಂತೆ ಚಿಕ್ಕಮಗಳೂರು ತಹಶೀಲ್ದಾರ್ ಅವರು ಕಣ್ಣನ್ ಅವರಿಗೆ ನೋಟಿಸ್ ನೀಡಿದ್ದರು. ಸದರಿ ನೋಟಿಸ್ ಅನ್ನು ವಾಪಸ್ ಪಡೆದು, ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಶೀಲ್ದಾರ್ ಮತ್ತು ಸಿಬ್ಬಂದಿಯಿಂದ ವಸೂಲಿ ಮಾಡಿ, ಜಮಾ ಮಾಡುವಂತೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.