ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದಾಗ ಸುದ್ದಿಗಾರರ ಮೇಲೆಯೇ ಕುಮಾರಸ್ವಾಮಿ ಸಿಟ್ಟಾದರು.
ದೆಹಲಿಯಿಂದ ತರಾತುರಿಯಲ್ಲಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಳೊಂದಿಗೆ ಮಾತಾಡವಾಗ ಎಲ್ಲ ಪ್ರಶ್ನೆಗಳಿಗೆ ಶಾಂತಚಿತ್ತರಾಗಿ ಉತ್ತರಿಸಿ ಸೂರಜ್ ರೇವಣ್ಣ ವಿಚಾರಕ್ಕೆ ಕೋಪಗೊಂಡರು.
“ಇಂತಹ ಪ್ರಶ್ನೆಗಳನ್ನೆಲ್ಲ ಕೇಳಬಾರದು, ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳೇನಾದರೂ ಇದ್ದರೆ ಕೇಳಿ. ಇಂತಹ ಸಮಸ್ಯೆಗಳನ್ನು ನೋಡಿಕೊಳ್ಳಲು ಪೊಲೀಸ್ ವ್ಯವಸ್ಥೆ ಮತ್ತು ಕಾನೂನುಗಳಿವೆ. ಯಾಕೆ ಪ್ರಕರಣ ಬರ್ತಿದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನನ್ನ ಬಳಿ ಆ ತರಹದ ಪ್ರಶ್ನೆಗಳನ್ನು ಕೇಳಬೇಡಿ” ಎಂದು ಕೋಪದಲ್ಲಿಯೇ ಕುಮಾರಸ್ವಾಮಿ ಉತ್ತರಿಸಿದರು.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, “ಡಿಕೆ ಶಿವಕುಮಾರ್ ಆದರೂ ಸ್ಪರ್ಧಿಸಲಿ ಇಲ್ಲವೇ ತಮ್ಮೊಂದಿಗೆ ಇನ್ನೂ ನಾಲ್ವರನ್ನು ಸೇರಿಸಿಕೊಂಡು ಕಣಕ್ಕಿಳಿಯಲಿ. ಅದು ನಮ್ಮ ಪಕ್ಷಕ್ಕೆ ಸಂಬಂಧಪಡದ ವಿಷಯ” ಎಂದು ಹೇಳಿದರು.