ಯಾರೋ ಕೆಲವು ಮನುವಾದಿಗಳನ್ನು ಮೆಚ್ಚಿಸಲು ಸರ್ಕಾರಿ ನೌಕರರು ಆರ್‌ಎಸ್‌ಎಸ್ ಶಾಖೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳುತ್ತಿರುವ ಕೇಂದ್ರ ಸರ್ಕಾರದ ನಿಲುವು ಅತ್ಯಂತ ಅಪಾಯಕಾರಿಯಾದುದು ಎಂದು ಸಚಿವ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, “ಸರ್ಕಾರ ಎಂಬುದು ಸದಾ ನ್ಯಾಯ ಪ್ರಜ್ಞೆಯನ್ನು ಇಟ್ಟುಕೊಂಡು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಪ್ರಜಾಪ್ರಭುತ್ವದ ಆಶಯಕ್ಕೆ ಅನುಸಾರವಾಗಿ ಕೆಲಸ ಮಾಡಬೇಕು” ಎಂದಿದ್ದಾರೆ.
“ಸರ್ಕಾರದ ಭಾಗವಾಗಿ ಕೆಲಸ ಮಾಡುವ ಸರ್ಕಾರೀ ನೌಕರರೂ ಸಹ ಪ್ರಜಾಪ್ರಭುತ್ವದ ಈ ಪ್ರಕ್ರಿಯೆಯ ಭಾಗವಾಗಿರುತ್ತಾರೆ. ಹೀಗಿರುವಾಗ ನೀವು ಇಂತದ್ದೇ ತಿನ್ನಬೇಕು, ಇಂತಹದ್ದೇ ಉಡುಪು ಧರಿಸಬೇಕು, ಹೀಗೇ ಬದುಕಬೇಕು ಮತ್ತು ನಾವು ಹೇಳುವ ರೀತಿಯಲ್ಲೇ ಬದುಕಬೇಕು ಎಂದು ಮೂಢ ನಂಬಿಕೆ ಮತ್ತು ಅವೈಜ್ಞಾನಿಕತೆಯನ್ನೇ ಉಸಿರಾಡುವ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ, ತಟಸ್ತವಾಗಿ, ಯಾವುದೇ ಸಾಮಾಜಿಕ ಮತ್ತು ಸೈದ್ಧಾಂತಿಕ ಪೂರ್ವಾಗ್ರಹ ಇಲ್ಲದೇ ಕೆಲಸ ಮಾಡುವ ಸಂವಿಧಾನಿಕ ಜವಾಬ್ದಾರಿ ಹೊತ್ತಿರುವ ಸರ್ಕಾರಿ ನೌಕರರು ಭಾಗವಹಿಸುವುದು ಯಾವ ರೀತಿಯಲ್ಲೂ ಸರಿಯಲ್ಲ” ಎಂದು ಹೇಳಿದ್ದಾರೆ.
“ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಆಳವಾಗಿ ಅಳವಡಿಸಿಕೊಂಡು, ಎಲ್ಲರನ್ನೂ ಕಾಪಾಡುವ ಸಂವಿಧಾನದ ರೀತಿ ನೀತಿಗಳನ್ನು ಗಾಳಿಗೆ ತೂರಿ ಜೀವಿಸಲು ಇಚ್ಛಿಸುವ ಆರ್ ಎಸ್ ಎಸ್ ನೊಳಗೆ, ಸಂವಿಧಾನದ ಸೇವಕರಾಗಿ ಕೆಲಸ ಮಾಡುವ ನೌಕರರು ಭಾಗವಹಿಸುವುದು ಒಪ್ಪುವ ನಡೆಯಲ್ಲ” ಎಂದು ತಿಳಿಸಿದ್ದಾರೆ.
“ಕೇಂದ್ರ ಸರ್ಕಾರ ಕೂಡಲೇ ತಮ್ಮ ಈ ನಿರ್ಧಾರವನ್ನು ರದ್ದುಪಡಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ” ಎಂದು ಮಹದೇವಪ್ಪ ತಿಳಿಸಿದ್ದಾರೆ.