Homeಕರ್ನಾಟಕ27,067 ಉದ್ಯೋಗ ಸೃಷ್ಟಿಸುವ ₹17,836 ಕೋಟಿ ಮೊತ್ತದ ಯೋಜನೆಗಳಿಗೆ ಸರ್ಕಾರ ಅನುಮೋದನೆ

27,067 ಉದ್ಯೋಗ ಸೃಷ್ಟಿಸುವ ₹17,836 ಕೋಟಿ ಮೊತ್ತದ ಯೋಜನೆಗಳಿಗೆ ಸರ್ಕಾರ ಅನುಮೋದನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ (ಎಸ್‌ಎಚ್‌ಎಲ್‌ಸಿಸಿ) 63ನೇ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯಾದ್ಯಂತ 27,067 ಉದ್ಯೋಗಗಳನ್ನು ಸೃಷ್ಟಿಸುವ ₹ 17,836 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಇದರಲ್ಲಿ ₹8220.05 ಕೋಟಿ ಮೊತ್ತದ 6 ಹೊಸ ಯೋಜನೆಗಳು ಮತ್ತು ₹9,615.85 ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳನ್ನು ಒಳಗೊಂಡಿದೆ.

“ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ದೊರೆತಿರುವ ಅನುಮತಿಗಳಿಂದ ಈ ಜಿಲ್ಲೆಗಳಲ್ಲಿ ಒಟ್ಟಾರೆ ₹ 10,433.72 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

“ವಿಸ್ಟ್ರಾನ್ ಇನ್ಫೊಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ₹ 2095 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ ಆರಂಭಿಸಲಿದೆ. ಇದರಿಂದ 21,723 ಜನರಿಗೆ ಉದ್ಯೋಗಗಳು ದೊರೆಯಲಿವೆ”ಎಂದು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಉಪಸ್ಥಿತರಿದ್ದರು.

ಹೊಸ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು

ರಾಜ್ಯದಲ್ಲಿ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲಿರುವ ಒಟ್ಟು 6 ಕಂಪನಿಗಳಾದ – ಎಸ್‍ಟಿಟಿ ಗ್ಲೋಬಲ್ ಡೇಟಾ ಸೆಂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯನ್ ಕೇನ್ ಪವರ್ ಲಿಮಿಟೆಡ್, ಐ.ಸಿ.ಟಿ ಸರ್ವಿಸ್ ಮ್ಯಾನೇಜ್‌ಮೆಂಟ್‌ ಸೊಲ್ಯೂಷನ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಶ್ರೀ ಬಾಲಾಜಿ ಷುಗರ್ಸ್ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಏರ್ ಇಂಡಿಯಾ ಲಿಮಿಟೆಡ್‌ನ ಒಟ್ಟು ₹ 8220.05 ಕೋಟಿ ಮೊತ್ತದ ಬಂಡವಾಳ ಹೂಡಿಕೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದೆ. ಈ ಹೊಸ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 27,067 ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಸಾಮರ್ಥ್ಯ ವಿಸ್ತರಣೆ ಉದ್ದೇಶದ ಹೆಚ್ಚುವರಿ ಹೂಡಿಕೆಯ 8 ಪ್ರಸ್ತಾವನೆಗಳಿಗೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಬಂಡವಾಳ ಹೂಡಿಕೆ ಹೆಚ್ಚಳದ ಪ್ರಸ್ತಾವನೆಗಳಲ್ಲಿ – ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್, ಆರ್‌ಬಿಎಸ್‌ಎಸ್‌ಎನ್‌ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಎಂವಿ ಎನರ್ಜಿ ಪ್ರೈವೇಟ್ ಲಿಮಿಟೆಡ್ (ಈ ಹಿಂದಿನ ಎಂವೆ ಫೋಟೊ ವೋಲ್ಟಾಯಿಕ್ ಪವರ್ ಪ್ರೈವೇಟ್ ಲಿಮಿಟೆಡ್), ಇಂಡಿಯನ್ ಕೇನ್ ಪವರ್ ಲಿಮಿಟೆಡ್ (ಅಳಗವಾಡಿ ಬೀರೇಶ್ವರ ಷುಗರ್ಸ್ ಘಟಕ ), ಗ್ರೀನ್ಕೊ ಕೆಎ01 ಐಆರ್‍ಇಪಿ ಪ್ರೈವೇಟ್ ಲಿಮಿಟೆಡ್ (ಈ ಹಿಂದಿನ ಗ್ರೀನ್ಕೊ ಸೋಲಾರ್ ಎನರ್ಜಿ ಪ್ರೈವೇಟ್ ಲಿಮಿಟೆಡ್), ಅಥಣಿ ಷುಗರ್ಸ್ ಲಿಮಿಟೆಡ್, ಉಕೆಮ್ ಅಗ್ರಿ ಇನ್‌ಫ್ರಾ ಲಿಮಿಟೆಡ್ ಮತ್ತು ಸ್ನೈಡರ್ ಎಲೆಕ್ಟ್ರಿಕ್ ಐಟಿ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿವೆ. ಇವುಗಳ ಹೆಚ್ಚುವರಿ ಹೂಡಿಕೆಯ ಮೊತ್ತವು ₹ 9,615.85 ಕೋಟಿಗಳಷ್ಟಿದೆ.

ಅಭಿವೃದ್ಧಿ ಆಯುಕ್ತೆ ಶ್ರೀಮತಿ ಡಾ.ಶಾಲಿನಿ ರಜನೀಶ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments