Homeಕರ್ನಾಟಕಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣ: ಡಿಸಿಎಂ ಡಿ ಕೆ ಶಿವಕುಮಾರ್

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣ: ಡಿಸಿಎಂ ಡಿ ಕೆ ಶಿವಕುಮಾರ್

ನಮ್ಮ ರೈತರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ವಾಗ್ದಾನ ನೀಡಿದರು.

ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಮುತ್ತಿನಮುಳುಸೋಗೆ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೇಕೆದಾಟು ಬಗ್ಗೆ ಕಾಂಗ್ರೆಸ್ ಸರ್ಕಾರ ಚಿಂತನೆ ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿಗಳಾದ ದೇವೇಗೌಡರು ಹೇಳಿದ್ದಾರೆ. ದೇವೇಗೌಡರೇ ನೀವು ಮತ್ತು ಪ್ರಧಾನಿ ಮೋದಿ ಅವರು ಆತ್ಮೀಯರಿದ್ದೀರಿ, ಅವರ ಬಳಿ ಮಾತನಾಡಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ” ಎಂದರು.

“ಕಾವೇರಿ ನದಿ ನಮ್ಮ ತಾಯಿ, ಈ ತಾಯಿಯ ಕೃಪೆಯಿಂದ ನಾವೆಲ್ಲಾ ಬದುಕಿದ್ದೇವೆ. ಆದರೂ ಈ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 26 ಜನ ಬಿಜೆಪಿ ಎಂಪಿಗಳು ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಪ್ರತಾಪ್ ಸಿಂಹ ಅವರು ಪ್ರಧಾನಿಗಳಿಗೆ ಹೇಳಿ ಅನುಮತಿ ಕೊಡಿಸಬಹುದಲ್ಲವೇ? ಆದರೂ ಯಾರೂ ದನಿ ಎತ್ತುತ್ತಿಲ್ಲ” ಎಂದು ಹೇಳಿದರು.

“ಮೇಕೆದಾಟು ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಗಳ ಬದಲಾಗಿ ಕಂದಾಯ ಭೂಮಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮರಗಳ ಎಣಿಕೆ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.

“2018 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಗುದ್ದಲಿಪೂಜೆಯಾದ ಮುತ್ತಿನಮುಳುಸೋಗೆ ಏತ ನೀರಾವರಿ ಯೋಜನೆ ನಮ್ಮಿಂದಲೇ ಉದ್ಘಾಟನೆಯಾಗುತ್ತಿದೆ. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ಮಾಡಿದ ಕಾಂಗ್ರೆಸ್ ಸದಾ ರೈತಪರವಾಗಿ ಕೆಲಸ ಮಾಡುತ್ತದೆ. ರೈತನಿಗೆ ಸಂಬಳ, ವರ್ಗಾವಣೆ, ಬಡ್ತಿ, ನಿವೃತ್ತಿ, ಪಿಂಚಣಿ ಸೇರಿದಂತೆ ಯಾವ ಸೌಲಭ್ಯವೂ ಇಲ್ಲ. ಆದ ಕಾರಣ ಎಲ್ಲಾ ಸರ್ಕಾರಗಳು ರೈತರ ಪರ ನಿಲ್ಲಬೇಕು” ಎಂದರು.

ನಾವೇನೂ ಹಿಂದೂಗಳಲ್ಲವೇ?

“ನಮಗೆ ಭಾವನೆಗಳಿಗಿಂತ ಜನರಿಗೆ ಬದುಕು ಮುಖ್ಯ. ಕೆಲವೊಬ್ಬರು ಭಾವನೆಯ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ. ನಾವೇನೂ ಹಿಂದೂಗಳಲ್ಲವೇ, ಆಂಜನೇಯ ನಮ್ಮ ದೇವರಲ್ಲವೇ?, ನಮಗೆಲ್ಲಾ ದೇವರ ಮೇಲೆ ನಂಬಿಕೆ ಇಲ್ಲವೇ? ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮನಿದ್ದಾನೆ, ನನ್ನ ಹೆಸರಿನಲ್ಲಿ ಶಿವ, ವೆಂಕಟೇಶ್ ಅವರ ಹೆಸರಿನಲ್ಲಿ ವೆಂಕಟೇಶ, ಶಿವನ ಅವತಾರ ಮಹದೇವನ ಹೆಸರಿನ ಹೆಚ್.ಸಿ. ಮಹದೇವಪ್ಪ ಇಲ್ಲವೇ?, ನಾವೇನೂ ಹಿಂದೂಗಳಲ್ಲವೇ? ನಮ್ಮೆಲ್ಲರ ಬದುಕಿಗೆ ನಮ್ಮದೇ ಆದ ವಿಚಾರ ಇರುತ್ತದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments