ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಕನಸು ಮನಸಿನಲ್ಲೂ ಯೋಚನೆ ಮಾಡಲ್ಲ. ಈಗ ಅದು ನನ್ನ ಪಾಲಿಗೆ ನೂರಕ್ಕೆ ನೂರರಷ್ಟು ಮುಗಿದ ಅಧ್ಯಾಯ ಎಂದು ಗಂಗಾವತಿ ಕ್ಷೇತ್ರದ ಕೆಆರ್ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಯೋಚನೆಯೇ ಮಾಡಿಲ್ಲ. ಕೆಆರ್ಪಿಪಿ ಪಕ್ಷದ ಸ್ಥಾಪಿಸಿದಾಗ ಯಾರೆಲ್ಲಾ ಎಷ್ಟೇ ಪ್ರಯತ್ನಿಸಿದರೂ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸ್ವತಂತ್ರವಾಗಿಯೇ ನಾನು ಮುಂದೆ ಹೋಗುತ್ತೇನೆ” ಎಂದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ನನ್ನ ಸಹಾಯ ಕೇಳುವ ಪರಿಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಯಡಿಯೂರಪ್ಪ ಅವರನ್ನು ತಂದೆಯ ಸ್ಥಾನದಲ್ಲಿ ಗೌರವಿಸಿದರೆ, ಶ್ರೀರಾಮುಲು ಅವರನ್ನು ಮಗು ರೂಪದಲ್ಲಿ ನೋಡುತ್ತೇನೆ. ಅವರು ಆಯಾ ಪಕ್ಷದಲ್ಲಿ ಚೆನ್ನಾಗಿರಲಿ ಎಂದು ಬಯಸುವೆ ಹೊರತು ಅವರನ್ನು ಆಹ್ವಾನ ಮಾಡಲ್ಲ” ಎಂದು ತಿಳಿಸಿದರು.
ರಾಜಕೀಯಕ್ಕಾಗಿ ಕೌಟುಂಬಿಕ ಸಂಬಂಧ ಕಡಿದುಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿ, “ರಾಜಕೀಯ, ಸಿದ್ಧಾಂತ ಇಟ್ಟುಕೊಂಡು ನಾನು ಹೋಗುವಾಗ ಯಾವ ಸ್ನೇಹ, ಸಂಬಂಧದ ಪ್ರಶ್ನೆ ಬರುವುದೇ ಇಲ್ಲ. ನನ್ನ ಯೋಚನೆ, ಯೋಜನೆಗಳೇ ಪ್ರತ್ಯೇಕವಾಗಿರುವಾಗ ನನ್ನ ಹಾದಿಯಲ್ಲೇ ನಾನು ಹೋಗುತ್ತೇನೆ” ಎಂದು ಹೇಳಿದರು.
“ಲೋಕಸಭಾ ಚುನಾವಣೆ ದೃಷ್ಟಿಯಿಂದ ಯಾರೂ ನನ್ನ ಸಂಪರ್ಕ ಮಾಡಿಲ್ಲ, ನಾನೂ ಯಾರನ್ನೂ ಸಂಪರ್ಕ ಮಾಡಿಲ್ಲ. ನಾನು ಲೋಕಸಭಾ ಚುನಾವಣೆಗೆ ಸ್ಫರ್ಧೆ ಮಾಡುವುದಿಲ್ಲ. ಆದರೆ, ಎಂಟು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಲಸ ಮಾಡುತ್ತೇನೆ” ಎಂದರು.