“ಹಿಂದುಳಿದವರಿಗೆ ನ್ಯಾಯ ಕೊಡಲು ಒಂದು ಸಂಘಟನೆ ಬೇಕಾಗಿದೆ. ಹೀಗಾಗಿ ಸ್ವಾಮೀಜಿಗಳ ಸೂಚನೆಯಂತೆ ಒಂದು ಸಂಘಟನೆ ಕಟ್ಟಲು ತೀರ್ಮಾನ ಮಾಡಿದ್ದೇವೆ. ಈ ಸಂಘಟನೆಗೆ ಎಲ್ಲ ಸಮುದಾಯಗಳ ಶ್ರೀಗಳು, ಮುಖಂಡರು ಬೆಂಬಲ ಕೊಡುತ್ತೇವೆ ಎಂದಿದ್ದಾರೆ” ಎಂದು ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಂಘಟನೆ ರಚನೆಯ ಅಂತಿಮ ನಿರ್ಣಯವನ್ನು ಬಾಗಲಕೋಟೆಯಲ್ಲಿ ಕೈಗೊಳ್ಳುತ್ತೇವೆ. ಹುಬ್ಬಳ್ಳಿಯಲ್ಲಿ ಎಲ್ಲ ಜಾತಿಯವರನ್ನು ಸೇರಿಸಿ ಮೊದಲ ಸಭೆ ಮಾಡಿದ್ದೇವೆ. ಎಲ್ಲ ರಾಜಕೀಯ ಪಕ್ಷದವರು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಅನೇಕ ಸಲಹೆ ಬಂದಿವೆ” ಎಂದರು.
ಸಮಾಜದಲ್ಲಿ ಎಲ್ಲರಿಗೂ ಅನ್ಯಾಯ ಆಗುತ್ತಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡಲು ಸಂಘಟನೆ ಕಟ್ಟುತ್ತಿದ್ದೇವೆ. ರಾಣಿ ಚೆನ್ನಮ್ಮ ಬ್ರಿಗೇಡ್ ಮಾಡಲು ಸಲಹೆ ಬಂದಿದೆ. ನಮ್ಮ ಸಂಘಟನೆ ಅಲ್ಪ ಸಂಖ್ಯಾತರ ವಿರುದ್ಧ ಅಲ್ಲ. ಆದರೆ, ರಾಷ್ಟ್ರದ್ರೋಹಿ ಮುಸ್ಲಿಮರ ವಿರುದ್ಧವಾಗಿರುತ್ತದೆ
ಎಂದು ತಿಳಿಸಿದರು.
“ಬಾಗಲಕೋಟೆಯ ಚರಂತಿ ಮಠ ಸಮುದಾಯ ಭವನದಲ್ಲಿ ಅಕ್ಟೋಬರ್ 20 ರಂದು ಕಾರ್ಯಕ್ರಮ ನಡೆಯಲಿದೆ. 30 ರಿಂದ 40 ಜನ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಬಾಗಲಕೋಟೆ ಸಭೆ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದರು.
“ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದಾಗ, ಜನ ಬೆಂಬಲ ಸಿಕ್ಕಿತ್ತು. ಆದರೆ, ಬಿ ಎಸ್ ಯಡಿಯೂರಪ್ಪ ಅವರಿಗೆ ಸಹಿಸಿಕೊಳ್ಳಲು ಆಗದೆ ಅಮಿತ್ ಶಾ ಅವರಿಗೆ ದೂರು ಕೊಟ್ಟರು. ದೂರು ಕೊಡಲು ಕಾರಣವೇನು ಎಂದು ಬಿ ಎಸ್ ಯಡಿಯೂರಪ್ಪ ಅವರು ಕಾರಣ ಹೇಳಿಲ್ಲ. ಸಂಘಟನೆ ಬೇಡಾ ಅಂತ ಮಾತ್ರ ಹೇಳಿದರು. ಅವತ್ತು ನಾನು ತಪ್ಪು ಮಾಡಿದೆ. ರಾಯಣ್ಣ ಬ್ರಿಗೇಡ್ ಇರಬೇಕಿತ್ತು” ಎಂದರು.
“ಅಪ್ಪ ಮಕ್ಕಳ ಹೊಂದಾಣಿಕೆಯಿಂದ ಬಿಜೆಪಿ ಮುಕ್ತಿಯಾಗಬೇಕು. ಬಿಜೆಪಿ ಶುದ್ದೀಕರಣವಾಗಲು ಚುನಾವಣೆ ನಿಂತಿದ್ದೆ. ನಾನು ಬಿಜೆಪಿ ಸೇರಲ್ಲ, ನನಗೆ ಸಮಾಧಾನ ಆದರೆ ಮಾತ್ರ ವಾಪಸ್ ಬಿಜೆಪಿ ಸೇರುತ್ತೇನೆ. ನನ್ನ ಮಗನಿಗೆ ಹಾವೇರಿಗೆ ಟಿಕೆಟ್ ಕೊಡಿಸುತ್ತೇನೆ ಅಂತ ಹೇಳೆ ಯಡಿಯೂರಪ್ಪ ಮೋಸ ಮಾಡಿದರು” ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ರಘುಪತಿ ಭಟ್, ವೀರಭದ್ರಪ್ಪ ಹಾಲರವಿ ಇತರರು ಇದ್ದರು.