ಕಳೆದ ಎರಡು ಮೂರು ವರ್ಷಗಳಿಂದ ಕುಮಾರಸ್ವಾಮಿ ಟೀಕೆಗಳನ್ನು ಸಹಿಸಿಕೊಂಡಿದ್ದೆ. ಮಗನ ಸೋಲಿನ ನಂತರ ಅವರ ಮಾತು ಮಿತಿ ಮೀರಿದೆ. ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ. ನನ್ನದು ಹೆದರಿ ಕೂರುವ ರಕ್ತವಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಸಿದರು.
‘ನಪುಂಸಕ’ ಎಂದು ಟೀಕಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸಿ, ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾನು ಎಷ್ಟು ದಿನ ಸಹಿಸಲಿ. ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ” ಎಂದು ಆಗ್ರಹಿಸಿದರು.
“ನಾನು ವಿಧವೆಯರಿಗೆ ಗನ್ ಪಾಯಿಂಟ್ ನಲ್ಲಿಟ್ಟು ಈ ಆಸ್ತಿ ಬರೆಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹಾಗಿದ್ದರೆ ಅವರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲಿಸಲಿ” ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಒಬ್ಬರೇ ಗಂಡಸು
“ಕುಮಾರಸ್ವಾಮಿ ಒಬ್ಬರೇ ಗಂಡಸು. ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಒಮ್ಮೆ ನೋಡಿ. ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ. ಅಂದರೆ ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ನಾನು ಜೈಲು ನೋಡಿರುವವನು. ನಾನು ಜೈಲಲ್ಲಿ ಇದ್ದಾಗ ಅವರು ಬಂದು ನನ್ನ ನೋಡಿದ್ದರು. ಜೈಲಿನ ಒಳಗೆ ನಾನು ಎಷ್ಟು ಶಕ್ತಿಯಲ್ಲಿದ್ದೆ ಎಂದು ನೋಡಿದ್ದಾರೆ” ಎಂದರು ತಿರುಗೇಟು ನೀಡಿದರು.
ಗಣಿ ಡಿನೋಟಿಫಿಕೇಶನ್ ಪ್ರಕರಣಲ್ಲಿ ವಿಚಾರಣೆಗೆ ಅವಕಾಶ ನೀಡಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, “ಆ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ನನ್ನ ಮೇಲೂ ಡಿನೋಟಿಫಿಕೇಶನ್ ಕೇಸು ದಾಖಲಿಸಿದ್ದರು. ಆ ಪ್ರಕರಣದಲ್ಲಿ ಯಡಿಯೂರಪ್ಪ ಶಿಫಾರಸ್ಸಿನ ಮೇಲೆ ಮಾಡಿದ್ದೆ. ಶಾಸಕ ಪತ್ರ ಬರೆದ ಕಾರಣ 16 (2) ಆಗಿರಲಿಲ್ಲ ಡಿನೋಟಿಫಿಕೇಶನ್ ಮಾಡಲಾಯಿತು. ನನ್ನ ಮೇಲೆ ಯಾಕೆ ಎಫ್ಐಆರ್ ಆಯಿತು? ಅದೇ ಆರ್.ಅಶೋಕ್ ಸೇರಿದಂತೆ ಬೇರೆ ಮಂತ್ರಿಗಳ ಮೇಲೆ ಕೇಸ್ ಆಗಲಿಲ್ಲ ಯಾಕೆ? ನಾನು ಕಾನೂನು ಸಮರದಲ್ಲಿ ಗೆದ್ದಿದ್ದೇನೆ. ಇದರಲ್ಲಿ ನಾನು ಅನುಭವಿಸಿರುವುದು ನನಗೆ ಮಾತ್ರ ಗೊತ್ತು” ಎಂದರು.
ಕುಮಾರಸ್ವಾಮಿ ಸರ್ಕಾರ ಬೀಳಿಸುವ ಮಾತು
ಈ ಸರ್ಕಾರ ತೆಗೆಯುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ಕುಮಾರಸ್ವಾಮಿ ಯಾವ ಆಧಾರದ ಮೇಲೆ 10 ತಿಂಗಳಲ್ಲಿ ಸರ್ಕಾರ ಬೀಳಿಸುತ್ತೇವೆ ಎಂದಿದ್ದಾರೆ? ಕುಮಾರಸ್ವಾಮಿ ಅವರ ಸರ್ಕಾರವನ್ನೇ ಬಿಜೆಪಿಯವರು ಬೀಳಿಸಿದ್ದರಲ್ಲಾ ಅದರ ಬಗ್ಗೆ ಕುಮಾರಸ್ವಾಮಿ ಯಡಿಯೂರಪ್ಪ, ಅಶೋಕ್, ಅಶ್ವತ್ಥನಾರಾಯಣ, ಅಶೋಕ್ ಅವರ ಬಗ್ಗೆ ಮಾತನಾಡುತ್ತಿಲ್ಲ? ನಮ್ಮ ಸರ್ಕಾರವನ್ನು ಹೇಗೆ 10 ತಿಂಗಳಲ್ಲಿ ತೆಗೆಯುತ್ತಾರೆ. ನಮ್ಮ ಸರ್ಕಾರವನ್ನು ಮುಟ್ಟಲಿ ನೋಡೋಣ” ಎಂದು ಸವಾಲು ಹಾಕಿದರು.