ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಸಾಕ್ಷ್ಯ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೋರ್ಟ್ ಬಿಡುಗಡೆ ಆದೇಶ ಹೊರಡಿಸಿದೆ. ಸೋಮವಾರ ವಿಚಾರಣೆ ನಡೆಸಿದ ಚಿತ್ರದುರ್ಗದ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಮುರುಘಾ ಮಠದ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಪ್ರಕರಣದ ಎ-1 ಆರೋಪಿ ಮುರುಘಾ ಈ ಹಿಂದೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು.
ಕೋರ್ಟ್‌ನಲ್ಲಿ ಸಾಕ್ಷ್ಯಗಳ ವಿಚಾರ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಮೇರೆಗೆ ಮತ್ತೆ ಶ್ರೀಗಳನ್ನು, ವಿಚಾರಣೆ ಪೂರ್ಣಗೊಳಿಸುವವರೆಗೆ ಬಂಧಿಸಲಾಗಿತ್ತು. ಇಂದು ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸಿ ಬಿಡುಗಡೆ ಆದೇಶ ಹೊರಡಿಸಿದೆ. ಕೋರ್ಟ್ ನಿಂದ ಜಿಲ್ಲಾ ಕಾರಾಗೃಹಕ್ಕೆ ತೆರಳಿದ ಬಳಿಕ ಮುರುಘಾ ಶರಣರ ಬಿಡುಗಡೆಗೆ ಮಾಡಲಾಗುತ್ತದೆ ಎನ್ನಲಾಗಿದೆ.
ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯ ಭಾಗವನ್ನು ತೆಗೆದುಹಾಕಲು ನಿರ್ದೇಶಿಸಬೇಕೆಂದು ಕೋರಿದ್ದ ಪ್ರಕರಣದ ಆರೋಪಿ, ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಸ್ವಾಮೀಜಿ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಸ್ವಾಮೀಜಿ ವಿರುದ್ಧ ಭಾರತೀಯ ದಂಡ ಸಂಹಿತೆ-1860 ರ ಕಲಂ 376 (2) (ಎನ್), 376 (3), 504 ಮತ್ತು ಪೋಕ್ಸೊ ಕಾಯಿದೆ 2012ರ ಕಲಂ 5 (ಎಲ್) ಮತ್ತು 6ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಈ ಕುರಿತಂತೆ ಚಿತ್ರದುರ್ಗ ಜಿಲ್ಲಾಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.