ಚುನಾವಣಾ ಬಾಂಡ್ ಮಾಹಿತಿಯನ್ನು ನೀಡಲು ನಾಲ್ಕು ತಿಂಗಳು ಸಮಯ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಎಸ್ಬಿಐ ತನ್ನ ಅರ್ಜಿಯಲ್ಲಿ ಸ್ವತಃ ಎಲ್ಲ ವಿವರಗಳು ಪ್ರತ್ಯೇಕವಾಗಿ ಲಭ್ಯವಿದೆ ಎಂದು ಉಲ್ಲೇಖಿಸಿದೆ. ಹಾಗಿರುವಾಗ ಹೆಚ್ಚುವರಿ ಸಮಯ ಯಾಕೆ ನೀಡಬೇಕು ಎಂದು ಪ್ರಶ್ನಿಸಿರುವ ಸುಪ್ರೀಂ ಎಸ್ಬಿಐಯನ್ನು ತರಾಟೆಗೆ ತೆಗೆದುಕೊಂಡು, 2024ರ ಮಾ.12ರ ಒಳಗಡೆ ಈ ಕುರಿತ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಎಸ್ಬಿಐಗೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಕಳೆದ ತಿಂಗಳು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದು, ಎಸ್ಬಿಐಗೆ ಚುನಾವಣಾ ಬಾಂಡ್ನ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲು ಮಾರ್ಚ್ 6ರವರೆಗೆ ಸಮಯ ನೀಡಿತ್ತು.
ಆದರೆ ಚುನಾವಣಾ ಬಾಂಡ್ನ ಸಂಪೂರ್ಣ ಮಾಹಿತಿಯನ್ನು ನೀಡಲು ಜೂನ್ ಅಂತ್ಯದವರೆಗೂ ಅಂದರೆ ನಾಲ್ಕು ತಿಂಗಳುಗಳ ಕಾಲಾವಕಾಶವನ್ನು ಕೋರಿ ಎಸ್ಬಿಐ ಅರ್ಜಿ ಸಲ್ಲಿಸಿತ್ತು. ಲೋಕಸಭೆ ಚುನಾವಣೆ ಮುಗಿಯುವವರೆಗೂ ಎಸ್ಬಿಐ ಅವಕಾಶ ಕೇಳಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.
ಇನ್ನು ಸುಪ್ರೀಂ ಕೋರ್ಟ್ ಆಸೋಸಿಷಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ (ಎಡಿಆರ್) ಎನ್ಜಿಒ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಎಸ್ಬಿಐ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ವೇಳೆ ಉಲ್ಲೇಖಿಸಿದೆ.