ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆಯೇ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ನಿರ್ದೇಶಕ ಅಶ್ವತ್ಥನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಅವರ ಆಪ್ತರಾಗಿರುವ ಅಶ್ವತ್ಥನಾರಾಯಣ ಬಾಬು ಅವರು ಎರಡು ಬಾರಿ ಪಕ್ಷೇತರರಾಗಿ (ಡಾ.ಎಂ.ಸಿ.ಸುಧಾಕರ್ ಬಣ) ಕೋಚಿಮುಲ್ ನಿರ್ದೇಶಕರಾಗಿದ್ದಾರೆ.
ಕೋಚಿಮುಲ್ ಇತ್ತೀಚೆಗೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ನೇಮಕಾತಿಯ ಪಟ್ಟಿಯೊಂದು ಅಭ್ಯರ್ಥಿಗಳ ಹೆಸರು ಮತ್ತು ಅಂಕಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಶಾಸಕ ಕೆ ವೈ ನಂಜೇಗೌಡ ನಿವಾಸದ ಮೇಲೆ ದಾಳಿ
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಒಕ್ಕೂಟದ (ಕೋಚಿಮುಲ್) ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದಾರೆ.
ಶಾಸಕರ ಮಾಲೂರು ತಾಲ್ಲೂಕಿನ ಕೊಮ್ಮನಹಳ್ಳಿ ನಿವಾಸ, ಶಾಸಕರ ಆಪ್ತ ಸಹಾಯಕ ಹರೀಶ್ ನಿವಾಸ, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್, ಕೋಚಿಮುಲ್ ಕಚೇರಿ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ನಿವಾಸ, ಆಡಳಿತಾತ್ಮಕ ನಿರ್ದೇಶಕ ನಾಗೇಶ್ ಅವರ ನಿವಾಸ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಶೋಧಿಸಿದ್ದಾರೆ.