ಯಾವ ಕಡೆಯಿಂದ ನೋಡಿದರೂ ರೈತರ ಸಂಕಷ್ಟಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಹೆಸರಿಗೆ ಅನ್ನದಾತ, ಆದರೆ; ಅವರ ಕಣ್ಣೀರು ಒರೆಸಿ ಅವರಿಗೆ ಧಾತನಾಗಿ ನಿಲ್ಲಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಕಟ್ಟಿ ಕೂತಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾಸ್ವಾಮಿ ಟೀಕಿಸಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ಬ್ಯಾಂಕ್ಗಳು ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಕುಮಾರಸ್ವಾಮಿ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
“ಕೇಂದ್ರ ಸರಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದ ಬರ ಪರಿಹಾರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬ್ಯಾಂಕ್ ಗಳ ವರ್ತನೆ ನಿಜಕ್ಕೂ ಕ್ರೂರಾತಿ ಕ್ರೂರ, ಖಂಡನೀಯ. ಮೊದಲೇ ತೀವ್ರ ಬರ, ಬೆಳೆನಾಶದಿಂದ ಕಂಗೆಟ್ಟಿರುವ ರೈತರ ಕಣ್ಣಲ್ಲಿ ರಕ್ತ ಕಣ್ಣೀರು ತರಿಸುವ ಅಮಾನವೀಯ ಕ್ರಮ ಇದು” ಎಂದಿದ್ದಾರೆ.
“ರಾಜ್ಯ ಸರ್ಕಾರ ಕೂಡಲೇ ಸಾಲ ನೀಡಿರುವ ಎಲ್ಲ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ ಕರೆದು, ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕು. ಬರ ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಬಾರದು ಎಂದು ತಾಕೀತು ಮಾಡಬೇಕು” ಎಂದು ಆಗ್ರಹಿಸಿದ್ದಾರೆ.