ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ?, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯವರು ಏನನ್ನು ಹಂಚುತ್ತಿದ್ದಾರೆ ಎಂದು ತೋರಿಸಬೇಕಾ? ಸತ್ಯ ಹರಿಶ್ಚಂದ್ರನ ಮೊಮ್ಮಗ ತರ ಮಾತಾಡ್ತಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಪನ್ ಕಾರ್ಡ್ ಗಳನ್ನು ಹಂಚುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ಅವರು ಪ್ರತಿಕ್ರಿಯಿಸಿದರು.
“ಮುನಿರತ್ನ, ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಹಂಚುತ್ತಿದ್ದಾರೆ. ನಾವು ಹಂಚುತ್ತಿರುವುದು ನಮ್ಮ ಪ್ರಣಾಳಿಕೆ ಕಾರ್ಡ್. ಇಷ್ಟಾದರೂ ಭಯ ಬಂದಿದೆಯಲ್ಲ. ಹೆದರಿಕೊಂಡು ರಣ ಹೇಡಿತರ ಬೇರೆ ಕಡೆ ಹೋಗಿದ್ದಾರೆ. ಅವರೇ ಚುನಾವಣೆಗೆ ನಿಂತುಕೊಳ್ಳಬೇಕಿತ್ತು. ಅಮಾಯಕರನ್ನು ನಿಲ್ಲಿಸಿ ಮಂಡ್ಯಕ್ಕೆ ಓಡಿ ಹೋಗಿದ್ದಾರೆ” ಎಂದರು
“ಕುಮಾರಸ್ವಾಮಿ ಏನೇನು ಮಾಡುತ್ತಿದ್ದಾರೆ, ಏನೇನು ಹಂಚುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲವೇ? ಮುನಿರತ್ನನ ಮೂಲಕ ಗೋಲ್ಡ್ ಕಾರ್ಡ್ ಮಾಡಿ ಹಂಚುತ್ತಿದ್ದಾರೆ. ಸಿನಿಮಾ ಸ್ಟೈಲ್ ಅಲ್ಲಿ ಮಾಡಿದ್ದಾರೆ. ಅವರೇಕೆ ಇಷ್ಟೊಂದು ಹತಾಶರಾಗಿದ್ದಾರೆ. ಹರಿಶ್ಚಂದ್ರನ ಮೊಮ್ಮಗ ಏನು ಹಂಚಿದ್ದಾನೆ” ಎಂದು ಲೇವಡಿ ಮಾಡಿದರು.
“ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿ, ಹೆಣ್ಣು ಮಕ್ಕಳನ್ನು ಅಗೌರವದಿಂದ ಕಂಡಿದ್ದಾರೆ. ಮಾಧ್ಯಮಗಳಲ್ಲಿ ಅವರ ಕರ್ಮಕಾಂಡ ತೋರಿಸುತ್ತಿದ್ದಾರೆ. ಇದರ ವಿರುದ್ದ ಹೊಸ ಕಾನೂನು ಮಾಡಬೇಕು ಎಂದು ಯಾರೋ ಹೇಳುತ್ತಿರುವುದನ್ನು ನಾನು ಕೇಳಿದೆ” ಎಂದರು.
ಸಂಸದನೊಬ್ಬ ಹೆಣ್ಣುಮಕ್ಕಳ ಜೊತೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದಾಗ “ಇದರ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ, ಡಾ.ಮಂಜುನಾಥ್, ರೇವಣ್ಣ ಅವರನ್ನು ಕೇಳಿ. ನಾನು ಉತ್ತರ ಕೊಡಲು ಆಗುವುದಿಲ್ಲ. ಅವರ ಆಚಾರ ವಿಚಾರ ಎಲ್ಲವೂ ಅವರೇ. ನನಗೆ ಇದನ್ನು ನೋಡಿ ಅವಮಾನವಾಗುತ್ತಿದೆ” ಎಂದು ಹೇಳಿದರು.
“ಬೆಜೆಪಿ ಗೊಂದಲದಲ್ಲಿ ಮುಳುಗಿದೆ. ರೈತರು, ತಾಯಂದಿರು, ಯುವ ಸಮುದಾಯ, ಎಲ್ಲಾ ವರ್ಗದ ಜನರು ಹಾಗೂ ದಳ- ಬಿಜೆಪಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ” ಎಂದರು.
ಜೆ.ಪಿ.ನಡ್ಡಾ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ “ಆಕಾಶದಿಂದ ಯಾರೇ ಕೆಳಗೆ ಉದುರಲಿ ಕಾಂಗ್ರೆಸ್ ಪಕ್ಷಕ್ಕೆ ಏನೂ ಮಾಡಲು ಆಗುವುದಿಲ್ಲ“ ಎಂದು ಹೇಳಿದರು.