Homeಕರ್ನಾಟಕಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ | ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರದ ಭರವಸೆ ನೀಡಿದ...

ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ | ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರದ ಭರವಸೆ ನೀಡಿದ ಡಿ ಕೆ ಶಿವಕುಮಾರ್‌

ವಿಧವಾ ವೇತನ ನೀಡಲು ವೃದ್ಧೆ ಬಳಿ 4 ಸಾವಿರ ಲಂಚ ಕೇಳಿದ ಅಧಿಕಾರಿ ವಿರುದ್ಧ ಕ್ರಮ, ಸರ್ಕಾರಿ ಪ್ರೌಢಶಾಲಾ ಶಾಲೆ ಕಟ್ಟಿಸಿಕೊಡಿ, ನಮ್ಮ ಏರಿಯಾ ಜನರಿಗೆ ಕುಡಿಯುವ ನೀರು, ಸ್ಮಶಾನಕ್ಕೆ ಜಾಗ ಬೇಕು, ಅಂಗನವಾಡಿ, ಸಂಚಾರ ದಟ್ಟಣೆ, ಪಾರ್ಕ್ ಸಮಸ್ಯೆ ಬಗೆಹರಿಸಿ ಎಂದು ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿ ಕಾನೂನಾತ್ಮಕ ಪರಿಹಾರದ ಭರವಸೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್‌ ನೀಡಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಜರಗನಹಳ್ಳಿ ಸರ್ಕಾರಿ ಶಾಲಾ ಆಟದ ಮೈದಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಬನಶಂಕರಿ ತಾಲ್ಲೂಕು ಕಚೇರಿಯಲ್ಲಿ ಪಿಂಚಣಿ ಪಡೆಯಲು ಗೊಟ್ಟಿಗೆರೆಯ ಮಣಿಯಮ್ಮ ಅವರು ಹೋದಾಗ ಅಧಿಕಾರಿಗಳೇ ಏಜೆಂಟರ ಬಳಿ ಕಳುಹಿಸುತ್ತಾರೆ. ಗೇಟ್ ಬಳಿ ರಮೇಶ್ ಎಂಬುವವರು ಹಾಗು ಕೊಠಡಿ ಸಂಖ್ಯೆ 24 ರಲ್ಲಿರುವ ಅಧಿಕಾರಿ ನಾಲ್ಕು ಸಾವಿರ ಲಂಚ ಕೇಳುತ್ತಾರೆ ಎಂದು ದೂರು ನೀಡಿದಾಗ, ಬನಶಂಕರಿ ಉಪ ತಹಶೀಲ್ದಾರರನ್ನು ಕರೆದ ಶಿವಕುಮಾರ್ ಅವರು ಕೂಡಲೇ ಆ ಮಹಿಳೆಯಿಂದ ಲಂಚ ಕೇಳಿದ ಅಧಿಕಾರಿ ಮಾಹಿತಿ ಪಡೆದು ಆತನನ್ನು ಅಮಾನತು ಮಾಡಿ ಎಂದು ಸೂಚಿಸಿದರು.

ಕೊರೋನಾ ಸಮಯದಲ್ಲಿ ಮುಚ್ಚಿರುವ ಉದ್ಯಾನಗಳನ್ನು ತೆರೆಯಿರಿ ಎಂದು ಸುರೇಂದ್ರನಾಥ ಅವರು ಮನವಿ ನೀಡಿದಾಗ. “ಉದ್ಯಾನಗಳನ್ನು ಸಾರ್ವಜನಿಕರ ಬಳಕೆಗೆ ತೆರೆಯಿರಿ” ಎಂದು ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.

ಎಸ್‌ಡಿಎಂಸಿ, ಸಿಡಿಸಿ ಸಮಿತಿಗಳಲ್ಲಿ ಕಳೆದ 15 ವರ್ಷಗಳಿಂದ ಒಂದೇ ಪಕ್ಷದವರು ಆಡಳಿತ ಮಾಡುತ್ತಿದ್ದಾರೆ. ನಮಗೂ ಅವಕಾಶ ನೀಡಿ ಎಂಬ ಬೊಮ್ಮನಹಳ್ಳಿಯ ಅನಿಲ್ ಅವರ ಮನವಿಗೆ “ಸಮಿತಿಗಳಿಗಳಲ್ಲಿ ಎಲ್ಲಾ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವಂತೆ ನೋಡಿಕೊಳ್ಳಲಾಗುವುದು” ಎಂದರು ಡಿಸಿಎಂ.

‘ರೋಗ- ರುಜಿನಗಳು, ಅಂಗವಿಕಲವಾಗಿರುವ ಪ್ರಾಣಿಗಳನ್ನು ಸಾಕಲು ಒಂದು ಜಾಗ ನೀಡಿ’ ಎಂದು ವೀಣಾ ಕೇಶವಮೂರ್ತಿ ಎಂಬುವರು ಮನವಿ ಸಲ್ಲಿಸಿದಾಗ “ಜಾಗ ನೀಡುವ ಕುರಿತು ಪರಿಶೀಲನೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಜರಗನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣ ಮಾಡಬೇಕು ಎಂದು ಸತ್ಯನಾರಾಯಣ ಅವರು ಮನವಿ ನೀಡಿದಾಗ “ಜಾಗ ಇದೆಯೇ” ಎಂದು ಡಿಸಿಎಂ ಕೇಳಿದರು. “ಪ್ರಸ್ತುತ ಕಾರ್ಯಕ್ರಮ ನಡೆಯುತ್ತಿರುವ ಜಾಗದಲ್ಲೇ ನಿರ್ಮಾಣ ಮಾಡಬಹುದು” ಎಂದು ಮನವಿದಾರರು ತಿಳಿಸಿದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು “ಶೀಘ್ರದಲ್ಲಿಯೇ ಮಾಡೋಣ” ಎಂದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ, “ರಾಜಕೀಯದಲ್ಲಿ ಧರ್ಮ ಪಾಲನೆ ಮಾಡಬೇಕು, ಆದರೆ ಧರ್ಮದಲ್ಲಿ ರಾಜಕಾರಣ ಮಾಡಬಾರದು. ಈ ವಿಚಾರವನ್ನು ಹಿಂದೆಯೂ ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments