ಡಿಕೆ ಶಿವಕುಮಾರ್ ಅವರು ಅಕ್ಕಿಯನ್ನು ದೊಡ್ಡ ಆಲಹಳ್ಳಿಯಲ್ಲಿ ಬೆಳೆದು ಕಳುಹಿಸಿದ್ದಾರಾ? ರಾಮಮಂದಿರಕ್ಕೆ ಹೋಗಲು ಕಾಂಗ್ರೆಸ್‌ನವರಿಗೆ ಆಹ್ವಾನ ಕೊಡಬೇಕಾ? ರಾಮಮಂದಿರಕ್ಕೆ ಎಲ್ಲರೂ ಬರಬಹುದು ಎಂದು ಪ್ರಧಾನಿ ಹೇಳಿದ್ದಾರಲ್ವಾ? ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಅಯೋಧ್ಯೆಯ ರಾಮ ಮಂದಿರದ ಆಹ್ವಾನದ ಮಂತ್ರಾಕ್ಷತೆಯನ್ನು ‘ಅನ್ನಭಾಗ್ಯ’ ಅಕ್ಕಿಯಲ್ಲೇ ಮಂತ್ರಾಕ್ಷತೆ ಕೊಡುತ್ತಿದ್ದಾರೆ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಹೀಗೆ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಜೆಡಿಎಸ್ ಸಭೆಯ ಬಳಿಕ ಮಾತನಾಡಿದ ಅವರು, “ರಾಮಮಂದಿರಕ್ಕೆ ಎಲ್ಲರೂ ಬರಬಹುದು ಎಂದು ಪ್ರಧಾನಿ ಹೇಳಿದ್ದಾರೆ. ಕಾರ್ಯಕ್ರಮ ನಡೆಯುವ ದಿನ ದೊಡ್ಡಮಟ್ಟದಲ್ಲಿ ಜನರು ಸೇರುತ್ತಾರೆ. ಮುಂದೆ ಸಾರ್ವಜನಿಕರಿಗೂ ಅವಕಾಶ ಇದೆ, ಆಗ ಹೋಗಬಹುದು. ರಾಮನ ಮೇಲೆ ಭಕ್ತಿ ಇರುವವರು ಹೋಗಬಹುದು” ಎಂದರು.
28 ಕ್ಕೆ 28 ಕ್ಷೇತ್ರಗಳಲ್ಲಿ ಮೈತ್ರಿ ಗೆಲ್ಲಲಿದೆ
“ಇವತ್ತಿನ ಜೆಡಿಎಸ್ ಸಭೆ ಮಹತ್ವ ಪಡೆದಿದೆ. ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರದ ಜೊತೆಗೆ ಬಿಜೆಪಿ ಅಭ್ಯರ್ಥಿಗಳನ್ನೂ ಗೆಲ್ಲಿಸಬೇಕೆಂಬುದು ನಮ್ಮ ಉದ್ದೇಶ. 28 ಕ್ಕೆ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ರಾಯಚೂರು, ಚಿತ್ರದುರ್ಗ, ಬೀದರ್, ಬಿಜಾಪುರ, ಕೊಪ್ಪಳ ಭಾಗದಲ್ಲಿ ಕನಿಷ್ಠ ಒಂದೂವರೆಯಿಂದ ಎರಡು ಲಕ್ಷ ಓಟು ನಮ್ಮ ಪಕ್ಷಕ್ಕೆ ಇದೆ. ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದ ಮುಖಂಡರ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡುತ್ತೇವೆ” ಎಂದು ಹೇಳಿದರು.
ಮಂಡ್ಯ ಸಂಸದೆ ಸುಮಲತಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, “ಅವರೇನು ನನಗೆ ಶತ್ರುವೇ? ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದಾರೆ. ನಾವು ಇಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಅದು ಹೊರತು ಪಡಿಸಿ ಬೇರೆ ಏನೂ ಇಲ್ಲ” ಎಂದು ತಿಳಿಸಿದರು.