Homeಕರ್ನಾಟಕಹಸುಗೂಸುಗಳ ಮಾರಾಟ ಜಾಲ ಪತ್ತೆ, ಮಾರಾಟಕ್ಕಾಗಿಯೇ ಜನ್ಮ ನೀಡುವ ಕೃತ್ಯ ಬಯಲಿಗೆ

ಹಸುಗೂಸುಗಳ ಮಾರಾಟ ಜಾಲ ಪತ್ತೆ, ಮಾರಾಟಕ್ಕಾಗಿಯೇ ಜನ್ಮ ನೀಡುವ ಕೃತ್ಯ ಬಯಲಿಗೆ

  • ಮಕ್ಕಳು ಹುಟ್ಟುವ ಮೊದಲೇ ಅಥವಾ ಗರ್ಭ ಧರಿಸುವ ಮೊದಲೇ ಡೀಲ್‌
  • ಮಕ್ಕಳಿಗಾಗಿ ಬೇಡಿಕೆ ಇಡುವ ಪೋಷಕರ ಜತೆಗೂ ನೆಟ್‌ವರ್ಕ್‌ ಹೊಂದಿದ್ದಾರೆ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಹಸುಗೂಸುಗಳ ಮಾರಾಟ ಜಾಲವನ್ನು ಕುಡುಕನೋರ್ವ ಮದ್ಯದ ಅಮಲಿನಲ್ಲಿ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಬೇಧಿಸುವುದರೊಂದಿಗೆ, ಮಕ್ಕಳನ್ನು ಮಾರಾಟಕ್ಕಾಗಿಯೇ ಜನ್ಮ ನೀಡುವ ಕೃತ್ಯ ವನ್ನು ಬಯಲಿಗೆಳೆದಿದ್ದಾರೆ.

ಕರ್ನಾಟಕ-ತಮಿಳುನಾಡು ರಾಜ್ಯಗಳಲ್ಲಿ ಅವ್ಯಾಹತವಾಗಿ ಹಸುಗೂಸು ಮಗು ಮಾರಾಟ ಜಾಲವು ಯಾವುದೇ ಸಿನಿಮಾಗೂ ಕಡಿಮೆ ಇಲ್ಲದ ರೀತಿಯಲ್ಲಿ ನಡೆಯುತ್ತಿದ್ದು ಜಾಲದಲ್ಲಿದ್ದ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಒಬ್ಬ ಪುರುಷನಾದರೆ, ಉಳಿದ ಏಳು ಮಂದಿ ಮಹಿಳೆಯರು. ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಸುಹಾಸಿನಿ, ಶರಣ್ಯ, ಹೇಮಲತಾ, ಮಹಾಲಕ್ಷ್ಮಿ, ಗೋಮತಿ, ರಾಧಾಮಣಿ ಬಂಧಿತ ಆರೋಪಿಗಳಾಗಿದ್ದಾರೆ.

ಈ ದಂಧೆ ಯಾವ ಮಟ್ಟದ್ದೆಂದರೆ ಇಲ್ಲಿ ಮಕ್ಕಳು ಹುಟ್ಟಿದ ಮೇಲೆ ಮಾರಾಟದ ಡೀಲ್‌ ಆಗುವುದಲ್ಲ. ಮಕ್ಕಳು ಹುಟ್ಟುವ ಮೊದಲೇ ಅಥವಾ ಗರ್ಭ ಧರಿಸುವ ಮೊದಲೇ ಡೀಲ್‌ ಆಗುತ್ತದೆ. ಅಂದರೆ ಇದು ಮಕ್ಕಳನ್ನು ಹೆತ್ತು ಮಾರಾಟ ಮಾಡುವ ಜಾಲವಾಗಿದೆ.

ಕಂದಮ್ಮಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿದ ಖದೀಮರು ನೆಟ್ ವರ್ಕ್ ಬೆಳೆಸಿ ಈ ದಂಧೆಯನ್ನು ನಡೆಸುತ್ತಿದ್ದಾರೆ. ಇದು ಹೇಗೆ ಕಾರ್ಯಾಚರಿಸುತ್ತದೆ ಎಂದರೆ, ಮೊದಲು ಗ್ಯಾಂಗ್‌ನ ಆರೋಪಿಗಳು ಬಡ ಮಹಿಳೆಯರನ್ನು ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಹಲವು ಮಕ್ಕಳನ್ನು ಪಡೆಯುವ ಕೆಲವು ವರ್ಗಗಳನ್ನು ಗುರುತಿಸುತ್ತದೆ.

ಅವರಿಗೆ ಹಣದ ಆಮಿಷವೊಡ್ಡಿ ಮಗು ಹುಟ್ಟುವ ಮೊದಲೇ ಡೀಲ್‌ ಮಾಡಿಕೊಳ್ಳಲಾಗುತ್ತದೆ. ಅವರು ಗರ್ಭ ಧರಿಸಿ ಮಕ್ಕಳಾದ ಬಳಿಕ ಅವುಗಳನ್ನು ಈ ಟೀಮ್‌ ಖರೀದಿ ಮಾಡುತ್ತದೆ. ಬಳಿಕ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಾರೆ.

ಗರ್ಭ ಧರಿಸುವ ಯುವತಿರನ್ನು ಗುರಿ ಮಾಡಿಕೊಂಡಿದ್ದರೆ, ಇನ್ನೊಂದು ಕಡೆಯಲ್ಲಿ ಮಕ್ಕಳಿಗಾಗಿ ಬೇಡಿಕೆ ಇಡುವ ಪೋಷಕರ ಜತೆಗೂ ಇವರು ನೆಟ್‌ವರ್ಕ್‌ ರಚನೆ ಮಾಡಿಕೊಂಡಿರುತ್ತಾರೆ. ಹಾಗೆ ಇಲ್ಲಿ ಮಕ್ಕಳು ಹುಟ್ಟುತ್ತಿದ್ದಂತೆಯೇ ಅವರಿಗೆ ಮಾರಾಟ ಮಾಡಲಾಗುತ್ತದೆ. ಈ ದಂಧೆಕೋರರ ಕೈಯಲ್ಲಿ ಆಗಲೇ 60 ಮಕ್ಕಳಿಗೆ ಬೇಡಿಕೆ ಇತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಗೊತ್ತಾಗಿದ್ದು ಹೇಗೆ?

ಮುರುಗೇಶ್ವರಿ ಎಂಬ ಮಹಿಳೆ ಗರ್ಭ ಧರಿಸಿದ್ದು ಆಕೆಗೆ ಹಣಕಾಸು ಮತ್ತಿತರ ಸಮಸ್ಯೆಯಿರುವ ಅಸಹಾಯಕತೆ ಗ್ಯಾಂಗ್‌ನ ಗಮನಕ್ಕೆ ಬಂದಿತ್ತು. ಬಹುಶಃ ಆಕೆಯನ್ನು ಪರೀಕ್ಷೆ ಮಾಡುತ್ತಿದ್ದ ವೈದ್ಯರೇ ಈ ಗ್ಯಾಂಗ್‌ನ ಪರಿಚಯ ಮಾಡಿಸಿರುವ ಸಾಧ್ಯತೆಗಳಿವೆ. ಮರುಗೇಶ್ವರಿಯನ್ನು ಭೇಟಿ ಮಾಡಿದ ಗ್ಯಾಂಗ್‌ ಆಕೆಗೆ ಹಣಕಾಸು ಮತ್ತು ನೈತಿಕ ಬೆಂಬಲವನ್ನು ನೀಡಿತ್ತು. ಮತ್ತು ಆಕೆಯ ಎಲ್ಲ ಪೋಷಣೆ ನೋಡಿಕೊಳ್ಳುವುದಾಗಿ ತಿಳಿಸಿತ್ತು. ಈ ಒಂದು ಡೀಲ್‌ನ ಬಗ್ಗೆ ಅದ್ಯಾವುದೋ ಮೂಲದಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಅದರ ಜತೆಗೆ ನವೆಂಬರ್‌ 24ರಂದು ಒಂದು ಮಗುವಿನ ಮಾರಾಟದ ಡೀಲ್‌ ನಡೆಯಲಿದೆ ಎಂಬ ಮಾಹಿತಿ ಇದಾಗಿತ್ತು. ಹೀಗಾಗಿ ಪೊಲೀಸರು ಡೀಲ್‌ ನಡೆಯಲಿದೆ ಎಂದು ನಿಗದಿಯಾಗಿದ್ದ ಆರ್‌ಆರ್‌ ನಗರ ದೇವಸ್ಥಾನದ ಬಳಿ ಹೊಂಚು ಹಾಕಿ ಕುಳಿತಿದ್ದರು. ಮಧ್ಯವರ್ತಿಗಳು ತಮಿಳುನಾಡು ನೋಂದಣಿಯ ಕಾರಿನಲ್ಲಿ ಬಂದಿದ್ದರೆ, ಸಿಸಿಬಿ ಅಧಿಕಾರಿಗಳು ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು. ಅಲ್ಲೇ ಈ ದಂಧೆಕೋರರನ್ನು ಮಟ್ಟ ಹಾಕಲಾಗಿದೆ.

ವೈದ್ಯರು ಭಾಗಿ

ಈ ದಂಧೆಕೋರರು ಎಷ್ಟೊಂದು ಪ್ರಭಾವಿಗಳಾಗಿದ್ದಾರೆ ಎಂದರೆ ಇವರು ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರನ್ನು ಕೂಡಾ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಐವಿಎಫ್‌ ಮತ್ತಿತರ ಕೃತಕ ಗರ್ಭಧಾರಣಾ ವಿಧಾನಗಳ ಮೂಲಕವೂ ಮಕ್ಕಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತಿದೆ.

ಅಸಹಾಯಕ ಯುವತಿಯರ ಗುರುತಿಸಿ ಒಂದೋ ಅವರಿಗೆ ಅವರದೇ ಪತಿಯ ಮೂಲಕ ಮಗುವನ್ನು ಪಡೆದು ಮಾರಾಟ ಮಾಡುವಂತೆ ಹೇಳುವುದು, ಇಲ್ಲವೇ ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವಂತೆ ಆಮಿಷ ಒಡ್ಡಲಾಗುತ್ತದೆ. ಒಮ್ಮೆ ಆ ಮಹಿಳೆ ಈ ಗ್ಯಾಂಗ್‌ ಜತೆ ಒಪ್ಪಂದ ಮಾಡಿಕೊಂಡಳೆಂದರೆ ಬಳಿಕ ಆಕೆಯ ಎಲ್ಲ ಆರೋಗ್ಯ ತಪಾಸಣೆಯ ನಿಗಾವನ್ನು ಇದೇ ತಂಡ ವಹಿಸಿಕೊಳ್ಳುತ್ತದೆ.

ಕೊನೆಗೆ ಹೆರಿಗೆಯ ಹಂತದಲ್ಲಿ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುತ್ತದೆ. ಬಳಿಕ ಆಸ್ಪತ್ರೆಯಿಂದಲೇ ಮಗುವನ್ನು ಹಸ್ತಾಂತರಿಸಲಾಗುತ್ತದೆ. ಇದು ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದು, ಕುಟುಂಬದ ಕೆಲವರಿಗಷ್ಟೇ ಗೊತ್ತಿರುತ್ತದೆ. ಕೊನೆಗೆ ಹೆರಿಗೆ ಹಂತದಲ್ಲೇ ಮಗು ಸಾವಾಗಿದೆ ಎಂತಲೋ, ಹುಟ್ಟಿದ ಬಳಿಕ ಪ್ರಾಣ ಬಿಟ್ಟಿದೆ ಎಂತಲೋ ಕತೆ ಕಟ್ಟಲಾಗುತ್ತದೆ. ಆದರೆ, ಮಗು ಮಾತ್ರ ಇನ್ಯಾರದೋ ಪಾಲಾಗಿರುತ್ತದೆ.

8 ರಿಂದ 15 ಲಕ್ಷ ನಿಗಧಿ

ಈ ಜಾಲ ಒಂದು ಮಗುವಿನ ಮಾರಾಟಕ್ಕೆ ಪಡೆಯುವ ಮೊತ್ತ 8ರಿಂದ 15 ಲಕ್ಷ ರೂ. ಈಗ ಬಂಧನಕ್ಕೆ ಒಳಗಾಗಿರುವ ತಂಡವು ಇದುವರೆಗೆ ಸುಮಾರು 60 ಶಿಶುಗಳ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದೆ.

ಈ ನಡುವೆ, ಹತ್ತು ಮಕ್ಕಳನ್ನು ಬುಕ್‌ ಮಾಡಿಕೊಂಡ ಪೋಷಕರ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಉಳಿದವರ ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈಗ ಬಂಧನದಲ್ಲಿರುವ ಎಂಟು ಮಂದಿಯನ್ನು ಕೂಡಾ ತೀವ್ರ ವಿಚಾರಣೆ ಮಾಡಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments