Homeಕರ್ನಾಟಕಕೋವಿಡ್‌ | ಯಡಿಯೂರಪ್ಪ ಸರ್ಕಾರದಲ್ಲಿ 40 ಸಾವಿರ ಕೋಟಿ ಅವ್ಯವಹಾರ: ಯತ್ನಾಳ್‌ ಆರೋಪ

ಕೋವಿಡ್‌ | ಯಡಿಯೂರಪ್ಪ ಸರ್ಕಾರದಲ್ಲಿ 40 ಸಾವಿರ ಕೋಟಿ ಅವ್ಯವಹಾರ: ಯತ್ನಾಳ್‌ ಆರೋಪ

ಕೊರೊನಾ ಮೊದಲನೇ ಅಲೆಯಲ್ಲಿ ಬಿ ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದರು. ಆ ವೇಳೆ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ​ ಯತ್ನಾಳ್ ಗಂಭೀರವಾಗಿ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರವಿದ್ದರೇನು? ಬೇರೆ ಸರ್ಕಾರ ಇದ್ದರೇನು? ಕಳ್ಳರು ಕಳ್ಳರೇ ಅಲ್ವಾ? ಯಡಿಯೂರಪ್ಪ ಅವಧಿಯಲ್ಲಿ ಪ್ರತಿಯೊಬ್ಬ ಕೊರೊನಾ ರೋಗಿಗೆ 8 ರಿಂದ 10 ಲಕ್ಷ ರೂ. ಬಿಲ್ ಮಾಡಿದ್ದಾರೆ” ಎಂದರು.

“ಬಿಜೆಪಿಯಲ್ಲಿ ಯಾರು ಯಾರು ಲೂಟಿ ಮಾಡಿ, ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದನ್ನು ಹೊರ ತೆಗೆಯುವೆ. ಯಡಿಯೂರಪ್ಪ ಅವರು ಕೊರೊನಾ ಸಂದರ್ಭದಲ್ಲಿ 45 ರೂಪಾಯಿ ಮಾಸ್ಕ್​ಗೆ 485 ರೂಪಾಯಿ ನಿಗದಿಪಡಿಸಿದರು. ಬೆಂಗಳೂರಿನಲ್ಲಿ 10 ಸಾವಿರ ಬೆಡ್ ಸಿದ್ದಪಡಿಸಿ, ಇದಕ್ಕೆ 10 ಸಾವಿರ ಬೆಡ್​​ ಬಾಡಿಗೆ ಪಡೆದಿದರು. ಆ ಹಣದಲ್ಲೇ ಬೆಡ್​​ಗಳನ್ನು ಖರೀದಿ ಮಾಡಿದ್ದರೆ ಉಳಿಯುತ್ತಿತ್ತು. ಇದರಲ್ಲಿ ಎಷ್ಟು ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದೀರಿ” ಎಂದು ಪ್ರಶ್ನಿಸಿದರು.

“ಬಿ ಎಸ್ ಯಡಿಯೂರಪ್ಪ ಅವರಿಗೆ ವಿಧಾನಸೌಧದಲ್ಲಿ ಈ ವಿಚಾರವನ್ನು ನೇರವಾಗಿ ಹೇಳಿರುವೆ. ನನಗೆ ಕೊರೊನಾ ಪಾಸಿಟಿವ್ ಆದಾಗ ಮಣಿಪಾಲ್ ಆಸ್ಪತ್ರೆಯಲ್ಲಿ 5 ಲಕ್ಷ 80 ಸಾವಿರ ತೆಗೆದುಕೊಂಡರು. ಇಷ್ಟು ಹಣವನ್ನು ಬಡವರಾದವರು ಎಲ್ಲಿಂದ ಕೊಡಬೇಕು” ಎಂದು ಅವಾಗಲೇ ಪ್ರಶ್ನಿಸಿದ್ದೆ” ಎಂದು ಹೇಳಿದರು.

ಎಲ್ಲರ ಬಣ್ಣ ಬಯಲು ಮಾಡುವೆ

“ನಾನು ಮಾತನಾಡುವುದಕ್ಕೆ ನನಗೆ ನೊಟೀಸ್ ಕೊಡಲಿ, ಪಕ್ಷದಿಂದ ಹೊರ ಹಾಕಲಿ, ಇವರೆಲ್ಲರ ಬಣ್ಣ ಬಯಲು ಮಾಡುವೆ. ಸತ್ಯ ಹೇಳಿದರೆ ಎಲ್ಲರಿಗೂ ಭಯ, ಹೀಗಾಗಿ ಭಯದಲ್ಲಿ ಇಡಬೇಕು. ಎಲ್ಲರೂ ಕಳ್ಳರಾದರೆ ರಾಜ್ಯ, ದೇಶವನ್ನು ಯಾರು ಉಳಿಸುತ್ತಾರೆ. ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ” ಎಂದರು.

“ಆರೋಗ್ಯ ವಿಚಾರದಲ್ಲಿ ನಾನು ಯಾವುದೇ ರೀತಿಯಲ್ಲೂ ಸರ್ಕಾರದಿಂದ ಹಣ ಇಲ್ಲಿವರೆಗೂ ಪಡೆದಿಲ್ಲ. ಶಾಸಕರಿಗೆ 2 ಲಕ್ಷ ರೂಪಾಯಿ ಸಂಬಳವಿದೆ. ನಾನು ಕಮಿಟಿ ಸಭೆಗೆ ಹೋದರೇ 65 ಸಾವಿರ ರೂಪಾಯಿ ಸಿಗುತ್ತದೆ. ತೆಗೆದುಕೊಂಡರೆ ನಾವು ಮನುಷ್ಯರಾ?” ಎಂದು ಹೇಳಿದರು.

ಯತ್ನಾಳರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಎಂಥವರ ಬಗ್ಗೆ ಪ್ರಶ್ನೆ ಕೇಳುತ್ತೀರಿ. ಅವರೆಲ್ಲ ರಾಜ್ಯ ಉಪಾಧ್ಯಕ್ಷ ಹೇಗೆ ಆಗುತ್ತಾರೆ. ಇನ್ನು ಬಹಳ ವಿಷಯಗಳಿವೆ ನನ್ನನ್ನು ಉಚ್ಚಾಟನೆ ಮಾಡಿದ ಬಳಿಕ ಬಯಲು ಮಾಡುತ್ತೇನೆ” ಎಂದು ಎಚ್ಚರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments