Homeಕರ್ನಾಟಕಸಂವಿಧಾನ ಬದಲಾವಣೆ: ಅನಂತಕುಮಾರ್ ಹೆಗಡೆ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ: ಪಿ.ರಾಜೀವ್

ಸಂವಿಧಾನ ಬದಲಾವಣೆ: ಅನಂತಕುಮಾರ್ ಹೆಗಡೆ ಹೇಳಿಕೆಗೂ ಬಿಜೆಪಿಗೂ ಸಂಬಂಧ ಇಲ್ಲ: ಪಿ.ರಾಜೀವ್

ಸಂಸದ ಅನಂತಕುಮಾರ್ ಹೆಗಡೆ ಅವರು ಸಂವಿಧಾನದ ಕುರಿತಾಗಿ ಕೊಟ್ಟ ಹೇಳಿಕೆಗೂ ಮತ್ತು ಬಿಜೆಪಿಗೆ ಯಾವುದೇ ರೀತಿಯ ಸಂಬಂಧ ಇಲ್ಲ. ರಾಷ್ಟ್ರೀಯ ನಾಯಕರು ಕೂಡ ಅದನ್ನು ಗಮನಿಸಿ ಅವರಿಂದ ಸ್ಪಷ್ಟನೆ ಕೇಳಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದರು.

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಕಾಂಗ್ರೆಸ್ಸಿನ ಕಾರ್ಯಕರ್ತರೊಬ್ಬರು ಪ್ರಧಾನಮಂತ್ರಿಯವರಿಗೆ ಅವಮಾನಕರವಾಗಿ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಇಂಥ ಚಟುವಟಿಕೆ ಆದರೆ ಅದನ್ನು ಗಮನಿಸಿ ತಕ್ಷಣದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.

“ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನಕ್ಕೆ ತಲೆಬಾಗಿ ನಮಿಸಿ ಸಂಸತ್ತನ್ನು ಪ್ರವೇಶ ಮಾಡಿದವರು. ಆದರೆ, ಸಂವಿಧಾನಕ್ಕೆ ಗೌರವಿಸಿ ಸಂಸತ್ ಪ್ರವೇಶಿಸಿದ ಪ್ರಧಾನಿಯವರ ಕುರಿತು ಕಾಂಗ್ರೆಸ್ ಕಾರ್ಯಕರ್ತ ಇಷ್ಟೊಂದು ಅವಹೇಳನಕಾರಿಯಾಗಿ ಮಾತನಾಡಿದಾಗ ಆತನಿಗೆ ತಿಳಿಹೇಳುವ ಮತ್ತು ಆತನ ಹೇಳಿಕೆಯನ್ನು ಖಂಡಿಸುವ ಕನಿಷ್ಠ ವರ್ತನೆಯನ್ನು ಕಾಂಗ್ರೆಸ್ಸಿನ ಯಾವ ನಾಯಕರೂ ಮಾಡಿಲ್ಲ” ಎಂದು ಆಕ್ಷೇಪಿಸಿದರು.

“ಮಲ್ಲಿಕಾರ್ಜುನ ಖರ್ಗೆಯವರಿಗೂ ಇಂಥ ಮಾತುಗಳು ಇಷ್ಟ ಆಗುವುದಿಲ್ಲ ಎಂದು ಭಾವಿಸುತ್ತೇನೆ. ಅವರ ಪಕ್ಷದ ಯಾರಾದರೂ ಕಾರ್ಯಕರ್ತರು ಈ ರೀತಿ ಮಾತನಾಡಿದಾಗ ಅವರು ವೈಯಕ್ತಿಕವಾಗಿ ನೊಂದುಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಎಂದ ಅವರು, ಇಂತಹ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಬೇಕಿತ್ತು” ಎಂದರು.

“ಡಿ.ಕೆ.ಶಿವಕುಮಾರ್ ಅವರು ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕುಂಟುನೆಪದ ಮೂಲಕ ಗಮನ ಬೇರೆ ಕಡೆ ಸೆಳೆಯುವುದನ್ನು ಬಿಟ್ಟುಬಿಡಲಿ. ಈ ಸರಕಾರ ಮುಂದಿನ ಪೂರ್ಣ ಅವಧಿಯವರೆಗೆ ಜನಪರ ಕೆಲಸ ಮಾಡಬೇಕು. ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಒತ್ತಿ ಹೇಳುತ್ತೇವೆ. ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತೇವೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅನಂತಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ: ಛಲವಾದಿ ನಾರಾಯಣಸ್ವಾಮಿ

“ಅನಂತಕುಮಾರ್ ಹೆಗಡೆ ಅವರ ಹೇಳಿಕೆ ಅವರ ವೈಯಕ್ತಿಕ ವಿಚಾರವೇ ಹೊರತು ಪಕ್ಷದ ವಿಚಾರ ಅಲ್ಲ. ಬಿಜೆಪಿ ಯಾವತ್ತೂ ಕೂಡ ಬಾಬಾ ಸಾಹೇಬ ಅಂಬೇಡ್ಕರರ ತತ್ವ, ಸಿದ್ಧಾಂತಗಳ ಜೊತೆ ಇದೆ” ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

“ನಮ್ಮ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಯ ಮಾತೇ ಇಲ್ಲ ಎಂದು ಪ್ರಧಾನಿಯವರೂ ಹೇಳಿದ್ದಾರೆ; ಅಲ್ಲದೆ ಸಂವಿಧಾನಕ್ಕೆ ನಮಿಸಿ ಪ್ರಧಾನಿ ಅವರು ಅಧಿಕಾರ ಸ್ವೀಕರಿಸಿದವರು” ಎಂದರು.

“ಅನಂತಕುಮಾರ್ ಹೆಗಡೆ ಅವರು ಬಹಳ ಹಿಂದೆ “ನಾವು ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲಿಕ್ಕೆ” ಎಂದು ಹೇಳಿಕೆ ಕೊಟ್ಟಿದ್ದರು. ಆಗ ಅವರು ಸಚಿವರಾಗಿದ್ದರು. ಮಾನ್ಯ ಪ್ರಧಾನಮಂತ್ರಿ ಮೋದಿಜೀ ಅವರು ಅವರನ್ನು ಸದನಕ್ಕೆ ಕರೆಸಿ ಕ್ಷಮೆ ಕೇಳಿಸುವ ಕೆಲಸ ಮಾಡಿದ್ದರು” ಎಂದು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments