ಸಂವಿಧಾನದ ಬದಲಾವಣೆ ಕುರಿತು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸಿಎಂ, ಡಿಸಿಎಂ ಹಾಗೂ ಸಚಿವರು ಹೆಗಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಎಕ್ಸ್ ತಾಣದಲ್ಲಿ ತೀವ್ರವಾಗಿ ಖಂಡಿಸಿ ಪೋಸ್ಟ್ ಮಾಡಿದ್ದು, “ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ಸಂಸದ ಅನಂತ ಕುಮಾರ ಹೆಗಡೆ ಅವರ ಹೇಳಿಕೆ ನೋಡಿದರೆ ಬಿಜೆಪಿ ಅಜೆಂಡಾದಲ್ಲಿ ಅದ್ಯಾವ ಪರಿ ವಿಷ ತುಂಬಿಕೊಂಡಿದೆ ಎಂಬುದರ ಸ್ಯಾಂಪಲ್ ಸಿಕ್ಕಂತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ. ಕರ್ನಾಟಕದ ಮತದಾರರೇ ಎಚ್ಚರದಿಂದಿರಿ” ಎಂದು ಡಿ ಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಅನಂತಕುಮಾರ್‌ರನ್ನು ಪಕ್ಷದಿಂದ ಹೊರಹಾಕಲಿ: ಪರಮೇಶ್ವರ್
ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ಕೊಡುತ್ತಿರುವ ಸಂಸದ ಅನಂತಕುಮಾರ್ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಂಬೇಡ್ಕರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಕ್ತ ಕಂಠದಿಂದ ಹೊಗಳಿದ್ದಾರೆ. ಸಂವಿಧಾನ ಇಲ್ಲದೇ ಹೋಗಿದ್ದಾರೆ ನಾನು ಪ್ರಧಾನಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಅವರ ಪಕ್ಷದ ಸಂಸದರೊಬ್ಬರು ಪದೇಪದೆ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ” ಎಂದರು.
“ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಅಂದರೆ ಹೇಗೆ? ಪಕ್ಷಕ್ಕೆ ಮುಜುಗರ ತರುವ ಮಾತುಗಳನ್ನು ಆಡಿದರೆ ಸರಿಪಡಿಸಬೇಕು. ಆದರೆ, ಸಂಸದ ಅನಂತಕುಮಾರ್ ಅವರ ಹೇಳಿಕೆಯಿಂದ ದೂರ ಇದ್ದೀವಿ ಎಂದು ಹೇಳಿದರೆ ಸಾಲುವುದಿಲ್ಲ. ಪಕ್ಷದಿಂದ ಹೊರಹಾಕಬೇಕು ಅಥವಾ ನಿಯಂತ್ರಿಸಬೇಕು. ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ” ಎಂದು ಹರಿಹಾಯ್ದರು.
ಸಂವಿಧಾನ ಬದಲಿಸುವ ರಹಸ್ಯ ಕಾರ್ಯಸೂಚಿ: ಮಂಕಾಳ ವೈದ್ಯ
ಸಂವಿಧಾನ ತಿದ್ದುಪಡಿ ಮಾಡುವ ಮಾತುಗಳನ್ನಾಡಿರುವ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಬಿಜೆಪಿ ತಕ್ಷಣ ಉಚ್ಚಾಟಿಸಲಿ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಕಾರವಾರದಲ್ಲಿ ಮಾತನಾಡಿದ ಅವರು, “ಅನಂತಕುಮಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸದಿದ್ದರೆ ಬಿಜೆಪಿಗೆ ಸಂವಿಧಾನ ಬದಲಿಸುವ ರಹಸ್ಯ ಕಾರ್ಯಸೂಚಿ ಹೊಂದಿದೆ ಎಂಬುದು ಸ್ಪಷ್ಟವಾದಂತೆ” ಎಂದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಂತಕುಮಾರ್ ಹೆಗಡೆ, “ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು” ಎಂದು ಹೇಳಿದ್ದರು.