ಲೋಕಸಭೆ ಚುನಾವಣೆಗೆ ನನ್ನ ಟಿಕೆಟ್ ತಪ್ಪಿಸಲು ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇರವಾಗಿಯೇ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, “ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಪಕ್ಷದ ಕೆಲಸ ಮಾಡುತ್ತಾರೆ ಎಂದಷ್ಟೇ ಹೇಳುತ್ತಿದ್ದರು. ಯಾವಗ ವಿರೋಧ ವ್ಯಕ್ತವಾಗುತ್ತದೆಯೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ” ಎಂದರು.
“ನನ್ನನ್ನು ಏಕೆ ವಿರೋಧ ಮಾಡ್ತಿದ್ದಾರೆ ಎಂದು ಪಕ್ಷದ ನಾಯಕರೂ ಮಾಹಿತಿ ಕಲೆ ಹಾಕಿದ್ದಾರೆ. ಇದರಿಂದಾದರೂ ಸತ್ಯ ಗೊತ್ತಾಗುತ್ತದೆ. ನಮ್ಮ ವ್ಯಕ್ತಿತ್ವವೇನು? ನಮ್ಮ ಅಭಿವೃದ್ಧಿ ಕೆಲಸಗಳು ಏನೆಂಬುದು ಗೊತ್ತಾಗುತ್ತವೆ” ಎಂದು ಹೇಳಿದರು.
“ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದಾಗಲ್ಲ. ಅದಕ್ಕಾಗಿ ನಮ್ಮ ಹೈಕಮಾಂಡ್ ಬಗ್ಗೆ ನನಗೆ ನಂಬಿಕೆಯಿದೆ, ಕೆಲಸದ ಆಧಾರದ ಮೇಲೆ ಟಿಕೆಟ್ ಸಿಗುತ್ತದೆ” ಎಂದು ಶೋಭಾ ಭರವಸೆ ವ್ಯಕ್ತಪಡಿಸಿದರು.
“ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗುತ್ತದೆ ಎಂಬ ಚರ್ಚೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲ. ಗೆಲ್ಲುವ ಪಕ್ಷದಿಂದ ಬಹಳಷ್ಟು ಜನರು ಟಿಕೆಟ್ ಕೇಳುವುದು ಸಹಜ, ಅದು ತಪ್ಪಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೇಳುವ ಹಕ್ಕಿದೆ” ಎಂದರು.