ಮಾದಕ ದ್ರವ್ಯ ದಂಧೆಯಲ್ಲಿ ತೊಡಗುವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆಯ ಕರ್ನಾಟಕ ವೇಸ್ಟೇಜ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್ ಪ್ರದೇಶದಲ್ಲಿ ನಡೆದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ‘ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ ಕಾರ್ಯಕ್ರಮ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಪಂಜಾಬ್‌ನಲ್ಲಿ ಪ್ರತಿಯೊಬ್ಬ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿದ್ದಾರೆ. ಮಾದಕವಸ್ತು ಬೆರೆಸಿದ ಚಾಕೋಲೆಟ್ ಮಾರುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಡ್ರಗ್ಸ್ ವ್ಯಸನಕ್ಕೆ ಅಂಟಿಸುವುದು ದಂಧೆಕೋರರ ಉದ್ದೇಶವಿರಬಹುದು. ಇದಕ್ಕೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಲು ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ” ಎಂದರು.
“ಡ್ರಗ್ಸ್ ದಂಧೆ ವಿಶ್ವದ ಜನ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಮಾದಕ ವಸ್ತುಗಳು ಇಡೀ ಸಮಾಜವನ್ನು ನಾಶ ಮಾಡುತ್ತಿದೆ. ವಿಶೇಷವಾಗಿ ಯುವಕರ ಜೀವನ ಹಾಳು ಮಾಡುತ್ತಿವೆ. ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಹಳಷ್ಟು ದೊಡ್ಡ ಸವಾಲಾಗಿ ನಿಂತಿದೆ” ಎಂದು ಹೇಳಿದರು.
ವಿಶ್ವಕ್ಕೆ ಸವಾಲು
“ವಿಶ್ವಕ್ಕೆ ಸವಾಲಾಗಿರುವ ಡ್ರಗ್ಸ್ ದಂದೆಯನ್ನು ಎದುರಿಸುವಲ್ಲಿ ಕೆಲ ಸಣ್ಣ ರಾಷ್ಟ್ರಗಳು ಸೋತು ಕೈಚೆಲ್ಲಿ ನಿಂತಿವೆ. ಹಾಲೆಂಡ್, ಸ್ವಿಟ್ಜರ್ಲೆಂಡ್ ಸೇರಿದಂತೆ ಇನ್ನು ಕೆಲದೇಶಗಳು ಏನಾದರಾಗಲಿ ಎಂಬಂತೆ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವುದನ್ನು ನಿಲ್ಲಿಸಿ, ಸೋಲನ್ನು ಒಪ್ಪಿಕೊಂಡಿವೆ. ಇಂತಹ ದುಸ್ಥಿತಿ ನಮ್ಮ ದೇಶಕ್ಕೆ ಬರಬಾರದು. ಈಗಲೇ ಎಚ್ಚೆತ್ತುಕೊಳ್ಳಬೇಕು” ಎಂದರು.
“ಪ್ರಬಲ ರಾಷ್ಟ್ರಗಳು ಯಾವುದೇ ಕಾರಣಕ್ಕು ಡ್ರಗ್ಸ್ ಯುವಕರ ಕೈಗೆ ಸಿಗಬಾರದು ಎಂಬ ನಿಟ್ಟಿನಲ್ಲಿ ಯುದ್ಧದ ರೀತಿ ಭಾವಿಸಿ ಕ್ರಮ ಕೈಗೊಂಡಿದ್ದಾರೆ. ಅದೇ ಮಾದರಿಯಲ್ಲಿ ಡ್ರಗ್ ಮಟ್ಟ ಹಾಕಬೇಕು. ಈಗಾಗಲೇ ಮಂಡ್ಯ, ಮೈಸೂರು, ಗದಗ ಜಿಲ್ಲೆಗಳು ಡ್ರಗ್ಸ್ ದಂಧೆ ನಿಯಂತ್ರಿಸುವಲ್ಲಿ ಮುಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಸವಾಲಾಗಿ ಸ್ವೀಕರಿಸಿ ಜಿಲ್ಲಾ ಮಟ್ಟದಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
“ವಿದೇಶದಿಂದ ಬರುವ ವಿದ್ಯಾರ್ಥಿಗಳು ಡ್ರಗ್ಸ್ ದಂಧೆಯಲ್ಲಿ ತೊಡಗುತ್ತಿದ್ದಾರೆ. ಆಫ್ರಿಕಾದವರು ಹೆಚ್ಚಾಗಿ ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತಿದ್ದು, ಇದನ್ನು ಮಟ್ಟ ಹಾಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
“ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಘೋಷಿಸಲಾಗಿದೆ. ಡ್ರಗ್ಸ್ ಪರೀಕ್ಷಿಸುವ ಕಿಟ್, ಪೊಲೀಸರಿಗೆ ವಿಶೇಷ ತರಬೇತಿ, ಕಾನೂನು ಭದ್ರಪಡಿಸುವ ಕೆಲಸ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆಯ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಕಳೆದ ಒಂದು ವರ್ಷದ ಅಂಕಿ-ಅಂಶದಿಂದ ಗೊತ್ತಾಗುತ್ತದೆ. ಕಾರ್ಯಾಚರಣೆ ಹೀಗೆ ನಿರಂತರವಾಗಿ ಮುಂದುವರಿಯಬೇಕು” ಎಂದು ಹೇಳಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಕೇಂದ್ರ ವಲಯ ಐಜಿಪಿ ಡಾ. ಬಿ.ಆರ್.ರವಿಕಾಂತೇಗೌಡ, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ, ಎಡಿಜಿಪಿ (ಕ್ರೈಮ್) ಉಮೇಶ್, ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ, ದಕ್ಷಿಣ ವಲಯ ಐಜಿಪಿ ಅಮಿತ್ ಸಿಂಗ್, ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹಾಗೂ ಕೇಂದ್ರ ಮತ್ತು ದಕ್ಷಿಣ ವಲಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದರು.