Homeಕರ್ನಾಟಕಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ಭ್ರಷ್ಟಾಚಾರ ನಡೆದಿದ್ದು ಅದಕ್ಕೆ ಅದರಲ್ಲಿ ಇಲಾಖೆಯ ಅಧಿಕಾರಿಗಳು ಷಾಮೀಲಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿ ಎಕ್ಸ್‌ ತಾಣದಲ್ಲಿ ವಾಗ್ದಾಳಿ ನಡೆಸಿದ್ದು, “ಬೆಳಗಾವಿಯಲ್ಲಿ ಬಾಣಂತಿಯರಿಗೆ, ಮಕ್ಕಳಿಗೆ ನೀಡಲಾಗುವ ಪೌಷ್ಠಿಕ ಆಹಾರದ ಟೆಂಡರ್ ನಲ್ಲಿ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ. ಇದಕ್ಕೆ ಇಲಾಖಾಧಿಕಾರಿಗಳು ಮೇಲು ಸಹಿ ಹಾಕಿರುವುದರಿಂದ ಇಲಾಖೆಯ ಹಿರಿಯ ಅಧಿಕಾರಿಗಳೇ ಈ ಭ್ರಷ್ಟಾಚಾರದಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಅಲ್ಲದೆ, ಇಡೀ ಸಚಿವಾಲಯವೇ ಭ್ರಷ್ಟಾಚಾರದಲ್ಲಿ ಮುಳುಗಿದೆ” ಎಂದು ಆರೋಪಿಸಿದೆ.

“ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆಯಲ್ಲೇ ಕೋಟಿ ಕೋಟಿ ಅಕ್ರಮ ಬಿಲ್‌ ಸಲ್ಲಿಸಿ ಕಲೆಕ್ಷನ್‌ ದಂಧೆ ನಡೆಸಲಾಗುತ್ತಿದೆ. ₹ 2 ಕೋಟಿ ನಕಲಿ ಬಿಲ್‌ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಚೇರಿಯಿಂದ ಮೇಲುಸಹಿ ಬೇರೆ ಪಡೆಯಲಾಗಿದೆ ಎಂದರೆ ಅಧಿಕಾರಿಗಳು ಮತ್ತು ಸಚಿವಾಲಯ ಭ್ರಷ್ಟಾಚಾರದಲ್ಲಿ ಹಾಸು ಹೊಕ್ಕಾಗಿದ್ದಾರೆ” ಎಂದು ಆರೋಪಿಸಿದೆ.

“ಬಾಣಂತಿಯರಿಗೆ ಮತ್ತು ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರವನ್ನು ನೀವು ಈ ರೀತಿ ತಿಂದರೆ ಜನ ಕ್ಷಮಿಸುತ್ತಾರೆ ಎಂದು ಅಂದುಕೊಂಡಿದ್ದೀರಾ ಲಕ್ಷ್ಮೀ ಹೆಬ್ಬಾಳ್ಕರ್‌ ಅವರೇ” ಎಂದು ಸಚಿವರನ್ನು ಬಿಜೆಪಿ ಪ್ರಶ್ನಿಸಿದೆ.

ಲೋಕಾಯುಕ್ತಕ್ಕೆ ದೂರು

ವಕೀಲರಾದ ನಟರಾಜ್ ಶರ್ಮಾ ಎಂಬುವರು ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಸಚಿವರ ಮೇಲೆ ಎರಡು ರೀತಿಯ ಆರೋಪಗಳನ್ನು ಮಾಡಲಾಗಿದೆ. ಅವರ ಪ್ರಕಾರ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಸರ್ಕಾರದ ವತಿಯಿಂದ ಸರಬರಾಜು ಮಾಡಲಾಗುವ ಪೌಷ್ಠಿಕ ಆಹಾರದ ಗುತ್ತಿಯನ್ನು ಆಯಾ ಊರುಗಳಲ್ಲಿರುವ ಸ್ಥಳೀಯ ಸಹಕಾರಿ ಸಂಸ್ಥೆಗಳಿಗೆ ನೀಡಬೇಕು ಎಂದು ಹೈಕೋರ್ಟ್ ಈ ಹಿಂದೆಯೇ ಹೇಳಿದೆ.

ಆದರೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಂಗಳೂರಿನ ಸಂಸ್ಥೆಯೊಂದಕ್ಕೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಸರಬರಾಜು ಮಾಡುವ ಗುತ್ತಿಗೆಯನ್ನು ಕ್ರಿಸ್ಟಿ ಫ್ರೈಡ್ ಗ್ರ್ಯಾಮ್ ಎಂಬ ಕಂಪನಿಗೆ ಪರೋಕ್ಷವಾಗಿ ನೀಡಿದ್ದಾರೆ. 2011ರಲ್ಲಿ ಈ ಕಂಪನಿಯು ಇದೇ ರೀತಿಯ ಗುತ್ತಿಗೆಯನ್ನು ಪಡೆದುಕೊಂಡಿತ್ತು.

ಆದರೆ, ಆ ಕಂಪನಿಯು ಸರಬರಾಜು ಮಾಡುತ್ತಿದ್ದ ಪೌಷ್ಠಿಕ ಆಹಾರದಲ್ಲಿ ಗುಣಮಟ್ಟದ ಕೊರತೆಯಿದ್ದಿದ್ದರಿಂದಾಗಿ ಆ ಕಂಪನಿಯನ್ನು ಬ್ಲ್ಯಾಕ್ ಲಿಸ್ಟ್ ಗೆ ಹಾಕಲಾಗಿತ್ತು. ಆದರೆ, ಬ್ಲ್ಯಾಕ್ ಲಿಸ್ಟ್ ಗೆ ಹಾಕಲಾಗಿರುವ ಕಂಪನಿಯ ಅಡಿಯಲ್ಲಿ ಮೂರು ಕಂಪನಿಗಳಿದ್ದು ಆ ಮೂರು ಕಂಪನಿಗಳಿಗೆ ಹೊಸ ಗುತ್ತಿಗೆಯನ್ನು ನೀಡಲಾಗಿದೆ ಎಂದು ನಟರಾಜ್ ಶರ್ಮಾ ಅವರು ಆರೋಪಿಸಿದ್ದಾರೆ.

ಬ್ಲ್ಯಾಕ್ ಲಿಸ್ಟ್ ನಲ್ಲಿರುವ ಕಂಪನಿಗೆ ಗುತ್ತಿಗೆ ನೀಡುವುದು ತಪ್ಪು ಹಾಗೂ ಅದರ ವಿಳಾಸ ಬೆಂಗಳೂರಿನಲ್ಲಿರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಗುತ್ತಿಗೆ ನೀಡಬೇಕೆಂಬ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತಾಗಿದೆ ಎಂದು ನಟರಾಜ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡುವಾಗ ವಿವರಿಸಿದ್ದಾರೆ. ಅಲ್ಲದೆ, ಶೇ. 10ರಷ್ಟು ಕಮೀಷನ್ ಪಡೆದು ದೊಡ್ಡ ಮೊತ್ತದ ಟೆಂಡರ್ ಅನ್ನು ಈ ಕಂಪನಿಗೆ ನೀಡಲಾಗಿದೆ ಎಂಬುದು ಅವರ ಮತ್ತೊಂದು ಆರೋಪ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಪ್ರಕಾಶ್ ಹಾಗೂ ಇಲಾಖೆಯ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ದೂರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments