ಮೌಲ್ವಿ ತನ್ವೀರ್ ಹಾಶ್ಮಿ ಅವರ ಜೊತೆಗಿನ ನನ್ನ ಪೋಟೊವನ್ನು ಹಿಡ್ಕೊಂಡು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನನ್ನ ವಿರುದ್ದ ಆರೋಪ ಮಾಡಿದರೂ ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, “ಮೌಲ್ವಿ ಹಾಶ್ಮಿ ಅವರ ಜೊತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರ ಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಪೋಟೊಗಳು ಸ್ಪಷ್ಟವಾಗಿ ಹೇಳುತ್ತಿವೆ. ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಮತ್ತು ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ” ಎಂದು ಪ್ರಶ್ನಿಸಿದ್ದಾರೆ.
“ರಾಜ್ಯ ಬಿಜೆಪಿ ಅಧ್ಯಕ್ಷತೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿಹೋಗಿರುವುದರಿಂದ ಯತ್ನಾಳ ಅವರು ಕೆರಳಿ ಕೆಂಡವಾಗಿದ್ದಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗಿನ ನನ್ನ ಪೋಟೋವನ್ನು ತೋರಿಸಿ ಆರೋಪ ಮಾಡಿದ್ದಾರೆ” ಎಂದಿದ್ದಾರೆ.
“ಈ ಆರೋಪದ ನಂತರ ಮೌಲ್ವಿ ಅವರ ಜೊತೆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧದ ವಿವರವೂ ಹೊರಬರಲಿದೆ ಎನ್ನುವುದು ಅವರಿಗೆ ಖಂಡಿತ ಗೊತ್ತಿತ್ತು. ಅವೆಲ್ಲವೂ ಬಯಲಾಗಿ ಪ್ರಧಾನಿ ಮತ್ತು ಬಿಜೆಪಿ ನಾಯಕರು ಮುಜುಗರಕ್ಕೀಡಾಗಲಿ ಎನ್ನುವ ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡುವ ಆಟ ಆಡಿದ್ದಾರೆ” ಎಂದು ತಿಳಿಸಿದ್ದಾರೆ.
“ಮೌಲ್ವಿ ಹಾಶ್ಮಿ ಅವರ ಜೊತೆಗಿನ ನನ್ನ ಸ್ನೇಹ ಸಂಬಂಧವನ್ನು ನಾನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದೇನೆ. ಹಾಶ್ಮಿಯವರೂ ಕೂಡಾ ಅವರ ಮೇಲಿನ ಆರೋಪದ ತನಿಖೆಯನ್ನು ಕೇಂದ್ರ ಸರ್ಕಾರವೇ ನಡೆಸಲಿ ಎಂದು ಸವಾಲು ಹಾಕಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಲೇ ಬೇಕಾಗುತ್ತದೆ. ಮೌಲಿ ತನ್ವೀರ್ ಹಾಶ್ಮಿ ಅವರಿಗೆ ನಿಜವಾಗಿ ಐಸಿಎಸ್ ಜೊತೆ ಸಂಬಂಧ ಇದ್ದರೆ ಆ ಬಗ್ಗೆ ತನಿಖೆಗೆ ಪ್ರಧಾನಿಯವರು ತಕ್ಷಣ ಆದೇಶ ನೀಡಬೇಕು ಮತ್ತು ಹಾಶ್ಮಿ ಮತ್ತು ತನ್ನ ಸಂಬಂಧದ ವಿವರವನ್ನು ದೇಶದ ಮುಂದಿಡಬೇಕು. ಇದು ಎರಡೂ ಮಾಡದೆ ಇದ್ದರೆ ಇಂತಹ ಸುಳ್ಳು ಆರೋಪ ಮಾಡುವ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮವನ್ನಾದರೂ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ರೀತಿಯ ಆರೋಪಗಳನ್ನು ಮಾಡುವುದು ಇದೇ ಮೊದಲ ಸಲವೇನಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಪುಂಖಾನುಪುಂಖವಾಗಿ ಆರೋಪ ಮಾಡಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ಪಕ್ಷದ ಹೈಕಮಾಂಡಿಗೆ ಎರಡು ಸಾವಿರ ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎನ್ನುವ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ. ಈ ರೀತಿ ಬಹಿರಂಗವಾಗಿ ತಮ್ಮ ಪಕ್ಷದ ಉನ್ನತ ನಾಯಕರ ವಿರುದ್ಧವೇ ಆರೋಪ ಮಾಡುತ್ತಿರುವ ಯತ್ನಾಳ ಅವರ ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು” ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿಯಲ್ಲಿರುವ ಯಾವ ‘ಜೀ’’ ಗಳ ಬಲದಿಂದ ಇಂತಹ ಸ್ವಪಕ್ಷೀಯರ ವಿರುದ್ಧ ಇಂತಹ ಮಾನಹಾನಿಕರ ಆರೋಪ ಮಾಡಿಯೂ ಅವರೂ ಬಚಾವಾಗುತ್ತಿದ್ದಾರೆ ಎನ್ನುವುದು ಕೂಡಾ ಬಯಲಾಗಬೇಕಾಗಿದೆ” ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
“ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಮೌಲ್ವಿ ತನ್ವೀರ್ ಹಾಶ್ಮಿ ಕುಟುಂಬದ ಜೊತೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ವ್ಯಾಪಾರಿ ಸಂಬಂಧ ಕೂಡಾ ಇದೆ ಎನ್ನುವುದು ಬಯಲಾಗಿದೆ. ಯತ್ನಾಳ ಅವರ ಆರೋಪದಂತೆ ತನ್ವೀರ್ ಹಾಶ್ಮಿ ಅವರಿಗೆ ಐಸಿಸ್ ಜೊತೆ ಸಂಬಂಧ ಇರುವುದಾಗಿದ್ದರೆ ಅವರ ಜೊತೆಗೆ ವ್ಯವಹಾರದ ಪಾಲುದಾರರಾಗಿರುವ ಯತ್ನಾಳ ಅವರಿಗೆ ಅದು ಗೊತ್ತಿರಲಿಲ್ಲವೇ? ಗೊತ್ತಿದ್ದೂ ಸುಮ್ಮನಿರಲು ಕಾರಣವೇನು? ಇಷ್ಟು ಸಮಯದ ನಂತರ ಇಂತಹ ಆರೋಪ ಮಾಡಲು ಕಾರಣಗಳೇನು ಎನ್ನುವುದನ್ನು ಕೂಡಾ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.