ಅಫೆಕ್ಸ್ ಬ್ಯಾಂಕ್ ನಲ್ಲಿ ಸಾಲ ಪಡೆದು ಪರುಪಾವತಿ ಮಾಡದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಬಳಿ ಇರುವ ಸೌಭಾಗ್ಯಲಕ್ಷ್ಮಿ ಶುಗರ್ ಲಿಮಿಟೆಡ್ ಕಾರ್ಖಾನೆ ಮೇಲೆ ದಾಳಿ ಮಾಡಿದ್ದು, ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.
ಕಾರ್ಖಾನೆ ಸ್ಥಾಪಿಸಿಲು 439 ಕೋಟಿ ರೂಪಾಯಿಯನ್ನು ಅಫೆಕ್ಸ್ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡಿದ್ದರು. ಆದರೆ, ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ಸಾಲ ಪಡೆದು ಪಾವತಿಸದೇ ಮೋಸ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಬೆಂಗಳೂರಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಜನವರಿ 5ರಂದು ದೂರು ದಾಖಲಿಸಿದ್ದರು.
ಸಾಲ ಪಡೆಯುವ ಸಂದರ್ಭದಲ್ಲಿ ಶುಗರ್ ಕಂಪೆನಿಯಲ್ಲಿ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ವಸಂತ್ ಮತ್ತು ಶಂಕರ್ ಅವರು ನಿರ್ದೇಶಕರಾಗಿದ್ದರು. ಸಾಲ ಇರುವ ಸಂದರ್ಭದಲ್ಲಿ ನಿರ್ದೇಶಕರನ್ನು ಬದಲಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಆರೋಪಿಗಳು/ಅರ್ಜಿದಾರರು ಕಂಪೆನಿಯಲ್ಲಿನ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಸಂಬಂಧಪಡದ ವ್ಯಕ್ತಿಗಳನ್ನು ಆ ಹುದ್ದೆಗಳಿಗೆ ನೇಮಿಸಲಾಗಿದೆ.
ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಜನವರಿ 5ರಂದು ನೀಡಿದ ದೂರಿನ ಅನ್ವಯ ವಿ ವಿ ಪುರಂ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 406, 420 & 34ರ ಅಡಿ ಪ್ರಕರಣ ದಾಖಲಾಗಿದೆ.
ತಮ್ಮ ವಿರುದ್ಧ ಎದುರಾಗಿರುವ ಬ್ಯಾಂಕ್ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರು ಮತ್ತು ಎಫ್‌ಐಆರ್ ರದ್ದುಗೊಳಿಸಲು ಕೋರಿ ರಮೇಶ್ ಜಾರಕಿಹೊಳಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ಬಾಕಿ ಇದೆ.