ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆಯಲ್ಲಿ ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧೆಡೆ ನಡೆದ ಅಕ್ರಮ ಬ್ಲೂಟೂತ್ ಡಿವೈಸ್ ಬಳಕೆಯ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ.
ಅಕ್ಟೋಬರ್ 28ರಂದು ಕೆಇಎ ವಿವಿಧ ನಿಗಮಗಳಲ್ಲಿನ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸಿತ್ತು. ಕೆಲವು ಅಭ್ಯರ್ಥಿಗಳು ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಜತೆಗೆ ಹಣದ ಒಪ್ಪಂದ ಮಾಡಿಕೊಂಡು ಆತನಿಂದ ಬ್ಲೂಟೂತ್ ಡಿವೈಸ್‌ಗಳನ್ನು ಪಡೆದು ಪರೀಕ್ಷೆಯ ದಿನವೇ ಬಂಧಿತರಾದರು.
ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ನವೆಂಬರ್ 10ರಂದು ಮಹಾರಾಷ್ಟ್ರದ ಅಕ್ಕಲಕೋಟದಲ್ಲಿ ಬಂಧಿಸಲಾಯಿತು. ಆತನ ಬಂಧನವಾದ ಮರುದಿನವೇ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
ಕಲಬುರಗಿಯ ಅಫಜಲಪುರ ಠಾಣೆಯಲ್ಲಿ ಐಪಿಸಿ 109, 114, 120ಬಿ ಸೇರಿದಂತೆ ಇತರೆ ಸೆಕ್ಷನ್ ಅಡಿ ದಾಖಲಾದ ಕ್ರೈಮ್ ನಂ.267/2023 ಪ್ರಕರಣವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಐಡಿ ತನಿಖೆಗೆ ಒಪ್ಪಿಸುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್.ಹಿತೇಂದ್ರ ಸೂಚಿಸಿದ್ದಾರೆ.