Homeಕರ್ನಾಟಕ'ಮನೆಗೊಂದು ಗ್ರಂಥಾಲಯ' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

‘ಮನೆಗೊಂದು ಗ್ರಂಥಾಲಯ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದರು.

‘ಮನೆಗೊಂದು ಗ್ರಂಥಾಲಯ’ದ ಮೊದಲ ಗ್ರಂಥಾಲಯವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸುತ್ತಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂ ಪ ನಾಗರಾಜಯ್ಯ ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಗ್ರಂಥಾಲಯ ಫಲಕವನ್ನು ಅನಾವರಣಗೊಳಿಸಿದರು.

ಮನೆಗೊಂದು ಗ್ರಂಥಾಲಯ ಯೋಜನೆಯಡಿ ರಾಜ್ಯದಾದ್ಯಂತ ಪ್ರಸಕ್ತ ಸಮಿತಿಯ ಅವಧಿಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಪುಸ್ತಕಾಭಿರುಚಿಯನ್ನು ಇಂದಿನ ಯುವಪೀಳಿಗೆಯಲ್ಲಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸು.

ಪ್ರಾಧಿಕಾರ ತಮ್ಮ ಮನೆಗಳಲ್ಲಿ ಗ್ರಂಥಾಲಯ ಆರಂಭಿಸುವ ಇಚ್ಛೆ ಉಳ್ಳವರನ್ನು ಸಂಪರ್ಕಿಸಿ ಆ ಭಾಗದ ಸಾಹಿತಿ ಬರಹಗಾರರನ್ನು ಅವರ ಮನೆಗೆ ಕರೆದೊಯ್ದು, ಅಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸಿ ಪ್ರಾಧಿಕಾರದ ಪರವಾಗಿ ಅವರಿಗೊಂದು ಪ್ರಮಾಣ ಪತ್ರ ನೀಡಲಾಗುತ್ತದೆ.

ಈ ಯೋಜನೆಯ ಪ್ರಮುಖ ಅಂಶಗಳು

  • ಮನೆ ಮನೆಯಲ್ಲಿ, ಸಂಘ ಸಂಸ್ಥೆಗಳಲ್ಲಿ ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ.
  • ಮನೆಯ ಒಡೆಯರು 100 ಪುಸ್ತಗಳಿಂದ ಆರಂಭಿಸಿ ಗ್ರಂಥಾಲಯವನ್ನು ಸ್ಥಾಪನೆ ಮಾಡಬೇಕು.
  • ಪುಸ್ತಕಗಳ ಖರೀದಿ ಹಾಗೂ ಅವುಗಳನ್ನು ಸುಸಜ್ಜಿತವಾಗಿ ಇಡುವ ಜವಾಬ್ದಾರಿ ಮನೆಯ ಒಡೆಯರದು.
  • ಸದರಿ ಗ್ರಂಥಾಲಯವನ್ನು ಗಣ್ಯರಿಂದ/ ವಿದ್ವಾಂಸರುಗಳಿಂದ / ಕಲಾವಿದರುಗಳಿಂದ ಉದ್ಘಾಟನೆಯನ್ನು ಮಾಡಿಸುವ ಜವಾಬ್ದಾರಿ ಪ್ರಾಧಿಕಾರದ್ದು.
  • ಪ್ರಚಾರದ ಜವಾಬ್ದಾರಿ ಪ್ರಾಧಿಕಾರದ್ದು.
  • ತಾಲ್ಲೂಕು / ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತ ಸಮಿತಿ ರಚನೆ.
  • ಗ್ರಂಥಾಲಯ ಸ್ಥಾಪಿಸಲು ಪ್ರೋತ್ಸಾಹ ನೀಡುವುದು, ಅದರ ಜೊತೆ ನಿಕಟ ಸಂಪರ್ಕ
    ಸಮಿತಿಯ ಜವಾಬ್ದಾರಿ.

ಕನ್ನಡ ಸಾಹಿತ್ಯ ಲೋಕದ ಅಜರಾಮರ ಕೃತಿಯಾದ ಕುಮಾರವ್ಯಾಸಭಾರತವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಓದುಗರಿಗೆ ಒದಗಿಸಲಾಗುವುದೆಂದು ಸುವರ್ಣ ಸಂಭ್ರಮ ಕಾರ್ಯಕ್ರಮದ ನಿಮಿತ್ತ ಕಳೆದ ವರ್ಷ ಗದಗಿನಲ್ಲಿ ಆಚರಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಘೋಷಿಸಿದ್ದರು. ಅದರಂತೆ ಕನ್ನಡ ಗಣಕ ಪರಿಷತ್ತು ಈ ಹಿಂದೆ ಪ್ರಕಟಿಸಿದ್ದ ಕುಮಾರವ್ಯಾಸಭಾರತದ ಕೃತಿಯ ಹಕ್ಕುಗಳನ್ನು ಪುಸ್ತಕ ಪ್ರಾಧಿಕಾರ ಪಡೆದುಕೊಂಡು ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಈ ಕುಮಾರವ್ಯಾಸಭಾರತವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಎರಡೂ ಸಂಪುಟಗಳು
ಸೇರಿ ಒಟ್ಟು 500 ರೂ. ಬೆಲೆ ನಿಗದಿಪಡಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಇಲಾಖೆ ನಿರ್ದೇಶಕರಾದ ಡಾ. ಧರಣೀದೇವಿ ಮಾಲಗತ್ತಿ ಹಾಗೂ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ, ಕನ್ನಡ ಸಾಹಿತ್ಯ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ, ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್ ಸಿಂಗ್ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments