ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಾಲಿಗೆ ಬಿದ್ದ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಭಗವಂತ ಖೂಬಾಗೆ ನೀಡಬಾರದು, ಒಳ್ಳೆಯ ವ್ಯಕ್ತಿಗೆ ನೀಡಬೇಕು ಎಂದು ಬಹಿರಂಗವಾಗಿಯೇ ಮನವಿ ಮಾಡಿದರು.
ಬೀದರ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಜಿಲ್ಲಾಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ಸಾವಿರಾರು ಜನರ ಮುಂದೆ ನಡೆದ ಈ ಘಟನೆ ವೇದಿಕೆಯಲ್ಲೇ ಇದ್ದ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡಿತು.
“ಹಾಲಿ ಸಂಸದ ಭಗವಂತ ಖೂಬಾ ಅವರು ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸಿ, ಜೈಲಿಗೆ ಕಳುಹಿಸಿದ್ದಾರೆ. ಪಕ್ಷದಲ್ಲೇ ಇದ್ದುಕೊಂಡು ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ, ಅವರಿಗೆ ಟಿಕೆಟ್ ನೀಡಬಾರದು” ಎಂದು ಚವ್ಹಾಣ್ ಬಹಿರಂಗವಾಗಿ ಕೂಗಿ ಹೇಳಿದರು.
ಇದೇ ಮೊದಲ ಬಾರಿಗೆ ಬಿ.ವೈ.ವಿಜಯೇಂದ್ರ ಬೀದರ್ ಜಿಲ್ಲೆಗೆ ಆಗಮಿಸಿದ್ದರು. ಟಿಕೆಟ್ ಆಕಾಂಕ್ಷಿಗಳಿಂದ ವಿಜಯೇಂದ್ರಗೆ ಭರ್ಜರಿ ಸ್ವಾಗತ ನೀಡಲಾಯಿತು.
ಸಂಸದರಾದ ಭಗವಂತ ಖೂಬಾ ಸೇರಿ ಗುರುನಾಥ ಕೊಳ್ಳೂರು, ಚನ್ನಬಸವಣ್ಣ ಬಳತೆ, ಮಾಜಿ ಶಾಸಕರಾದ ಸುಭಾಷ್ ಕಲ್ಲೂರ, ನಾಗರಾಜ ಕರ್ಪೂರ, ಡೋಣಗಾಂವ್‌ನ ಡಾ. ಶಂಭುಲಿಂಗ ಶಿವಾಚಾರ್ಯರು, ನಂದಕುಮಾರ ಸಾಳುಂಕೆ, ಪದ್ಮಾಕರ್ ಪಾಟೀಲ್, ಅನಂತ ಬಿರಾದಾರ್ ಸೇರಿ ಅನೇಕರು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು, ಲಾಬಿ ಶುರು ಮಾಡಿಕೊಂಡಿದ್ದಾರೆ. ಇವರ ಜತೆಗೆ ಹಾಲಿ ಶಾಸಕರಿಬ್ಬರೂ ಸಹ ಟಿಕೆಟ್ ನೀಡಿದರೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.