ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಹೊರ ರಾಜ್ಯಗಳಿಂದ ಅಂಚೆ ಮೂಲಕ ನಗರಕ್ಕೆ ಕಳುಹಿಸುತ್ತಿದ್ದ ಲಕ್ಷಾಂತರ ಮೌಲ್ಯದ ಚರಸ್ ಜಪ್ತಿ ಮಾಡಿದ್ದಾರೆ.
ಅಂಚೆ ಮೂಲಕ ಚರಸ್ ಬರುತ್ತಿರುವ ಖಚಿತವಾದ ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸರು ತಪಾಸಣೆ ತೀವ್ರಗೊಳಿಸಿದಾಗ ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲ ನಗರಕ್ಕೆ ಬಂದಿದೆ.
ಈ ಗಿಫ್ಟ್ ಬಾಕ್ಸ್ ಅನ್ನು ಜಾರ್ಖಂಡ್ ಮೂಲದ ರಿತಿಕ್ ರಾಜ್ ಎಂಬುವನು ಪಡೆಯುತ್ತಿದ್ದ ತಕ್ಷಣವೇ ಆತನನ್ನು ಬಂಧಿಸಿ ಬಾಕ್ಸ್ ತೆಗೆಸಿದಾಗ ಅದರಲ್ಲಿ ಚರಸ್ ಇರುವುದು ಪತ್ತೆಯಾಗಿದೆ.
ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ರಿಷಿಕೇಷದಿಂದ ಅಂಚೆ ಮೂಲಕ ಚರಸ್ ಕಳುಸಿದ್ದನು. ಇತ್ತ ರಿತಿಕ್ ರಾಜ್ ಅರೆಸ್ಟ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಅದಿತ್ ಸರ್ವೋತ್ತಮ್ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟಿಗೂ ಮೌಲ್ಯದ ಡ್ರಗ್ಸ್
ಕೆಲವು ದಿನಗಳ ಹಿಂದೆ ನಗರದಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ಏಳು ಜನ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದರು. ಪುಲಿಕೇಶಿನಗರ, ಬಾಣಸವಾಡಿ, ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ನಗರದ ಹಲವೆಡೆ ಆರೋಪಿಗಳು ಡ್ರಗ್ಸ್ ಮಾರುತ್ತಿದ್ದರು. 219 ಎಕ್ಸ್ಟೆಸಿ ಪಿಲ್ಸ್, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್, 130 ಗ್ರಾಂ ತೂಕದ ಚರಸ್, ಕೊಕೇನ್ ಒಟ್ಟು 1 ಕೋಟಿ 52 ಲಕ್ಷದ 50 ಸಾವಿರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು.