ವಿಧಾನ ಪರಿಷತ್ತಿನ ಮುಖ್ಯಸಚೇತಕ ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ಎಂಎಲ್‌ಸಿ ಮಂಜುನಾಥ ಭಂಡಾರಿ, ವಸಂತ್ ಕುಮಾರ್ ಅವರ ನೇತೃತ್ವದ ನಿಯೋಗ ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಭೇಟಿ ಮಾಡಿ, ಛಲವಾದಿ ನಾರಾಯಣಸ್ವಾಮಿ ಅವರ ಎಂಎಎಲ್‌ಸಿ ಸ್ಥಾನ ರದ್ದುಪಡಿಸುವಂತೆ ಮನವಿ ಮಾಡಿತು.
ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸರ್ಕಾರದಿಂದ ಪಡೆದುಕೊಂಡ ನಿವೇಶನವನ್ನು ದುರುಪಯೋಗಪಡಿಸಿಕೊಂಡಿದ್ದು, ಕರ್ನಾಟಕ ಗೃಹ ಮಂಡಳಿಗೆ ತಪ್ಪು ಮಾಹಿತಿ ಒದಗಿಸಿ ಕಾನೂನುಬಾಹಿರವಾಗಿ ಸಿ.ಎ ಸೈಟ್ ಪಡೆದಿದ್ದಾರೆ ಎಂದು ಸಲೀಂ ಅಹ್ಮದ್ ನಿಯೋಗ ಆರೋಪಿಸಿದೆ.
ಶಿಕ್ಷಣ ಉದ್ದೇಶಕ್ಕಾಗಿ ಪಡೆದುಕೊಂಡು ಹೌಸಿಂಗ್ ಬೋರ್ಡ್‌ನಲ್ಲಿರುವ ಸಿ.ಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್ ನಡೆಸಲು ಬಾಡಿಗೆ ಕೊಡಲಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ.
ಹೌಸಿಂಗ್ ಬೋರ್ಡ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಛಲವಾದಿ ನಾರಾಯಣ ಸ್ವಾಮಿ ಅವರು ಕೆಐಎಡಿಬಿಯಿಂದ ಸಿಎ ಸೈಟ್ ಪಡೆದುಕೊಂಡಿದ್ದರು. ಅದೇ ಸಂದರ್ಭದಲ್ಲಿ ಅವರು ಆದರ್ಶ ಸ್ಕೂಲ್ ಎಜುಕೇಶನ್ ಗ್ರೂಪ್‌ನ ಸಂಚಾಲಕರೂ ಆಗಿದ್ದರು. ಶಿಕ್ಷಣ ಸಂಸ್ಥೆ ನಡೆಸಲು ಪಡೆದುಕೊಂಡ ಸೈಟ್‌ನಲ್ಲಿ ಇದೀಗ ‘ಆನಂದ್ ಧಂ ಬಿರಿಯಾನಿ ಹೋಟೆಲ್’ ನಡೆಯುತ್ತಿದೆ ಎಂದು ದೂರಿದ್ದಾರೆ.
“ಶಿಕ್ಷಣ ಉದ್ದೇಶಕ್ಕೆ ಪಡೆದ ಜಾಗವನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬುವುದು ನಿಯಮವಾಗಿದೆ. ಆದರೆ, ಶಿಕ್ಷಣ ಉದ್ದೇಶಕ್ಕಾಗಿ ಪಡೆದಿರುವ ಸಿಎ ಸೈಟ್ ನಲ್ಲಿ ಧಂ ಬಿರಿಯಾನಿ ಹೊಟೇಲ್ ನಡೆಸುತ್ತಿದ್ದಾರೆ. ರಾಜ್ಯಪಾಲರಿಗೆ ಇದನ್ನು ವಿವರವಾಗಿ ತಿಳಿಸಿದ್ದೇವೆ. ಈ ಕೂಡಲೇ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಯನ್ನು ವಜಾ ಮಾಡಬೇಕು” ಎಂದು ಸಲೀಂ ಅಹ್ಮದ್ ಮಾಧ್ಯಮಗಳಿಗೆ ತಿಳಿಸಿದರು.
“ಛಲವಾದಿ ನಾರಾಯಣಸ್ವಾಮಿ ವಿಪಕ್ಷ ನಾಯಕನ ಸ್ಥಾನದ ಗಾಂಭೀರ್ಯತೆಗೆ ಧಕ್ಕೆ ತಂದಿದ್ದಾರೆ. ಕಳಂಕಿತರು ಆ ಸ್ಥಾನದಲ್ಲಿ ಇರಬಾರದು. 2002 ರಿಂದ 2004 ರವರೆಗೆ ಛಲವಾದಿಯವರು, ಕರ್ನಾಟಕ ಹೌಸಿಂಗ್ ಬೋರ್ಡ್ ಸದಸ್ಯರು ಆಗಿರುತ್ತಾರೆ. ಅವರ ಸ್ಥಾನ ದುರುಪಯೋಗ ಮಾಡಿಕೊಂಡು ಹೌಸಿಂಗ್ ಬೋರ್ಡ್‌ಗೆ ಭೂಸ್ವಾಧೀನ ಆಗಿದ್ದ ಭೂಮಿಯನ್ನು ತಾವು ಪಡೆಯುತ್ತಾರೆ” ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಹೇಳಿದರು.