ಕರ್ನಾಟಕ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಅನೇಕ ವಿಶ್ವ ವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ 3,600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಪ್ರಧಾನಮಂತ್ರಿ ಉಷಾ ಯೋಜನೆ’ಯಡಿ 78 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುದಾನ ನೀಡಿದ್ದು, ಆ ಹಣ ಇಂದೇ ಬಿಡುಗಡೆಯಾಗುತ್ತಿದೆ” ಎಂದರು.
ಕರ್ನಾಟಕದ ಯಾವ ವಿವಿಗೆ ಎಷ್ಟು ಅನುದಾನ?
ಉಷಾ ಯೋಜನೆಯಡಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂಪಾಯಿ, ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ಹಾಗೂ ಧಾರವಾಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ದೊರೆಯಲಿದೆ ಎಂದು ಜೋಶಿ ತಿಳಿಸಿದರು.
“ಸಾಕ್ಷರತೆಯಿಂದ ಮಾತ್ರ ದೇಶದ ನೈಜ ವಿಕಾಸ ಸಾಧ್ಯವೆಂದು ನಂಬಿರುವ ಪ್ರಧಾನಿ ಮೋದಿ ಅವರು ದೇಶದ ವಿಶ್ವವಿದ್ಯಾಲಯಗಳಿಗೆ ಹೊಸ ಜೀವ ತುಂಬಲು ಇಂತಹ ಮಹತ್ತರ ಯೋಜನೆಗೆ ಚಾಲನೆ ನೀಡಿದ್ದಾರೆ” ಎಂದರು.
ಜಮ್ಮು ಅಭಿವೃದ್ಧಿಗೆ ಐತಿಹಾಸಿಕ ಕ್ರಮ
“ಜಮ್ಮು- ಕಾಶ್ಮೀರ ಎಂದರೆ ಹಿಂಸಾಚಾರ, ಭಯೋತ್ಪಾದನೆಯೇ ಎಲ್ಲರ ಮನದಲ್ಲಿತ್ತು. ಈಗದು ಸಂಪೂರ್ಣ ಬದಲಾಗಿದೆ. ಅಲ್ಲಿ ಅಭಿವೃದ್ಧಿ ಆರಂಭವಾಗಿದೆ. ವಿಶ್ವವಿದ್ಯಾಲಯಗಳ ಅನುದಾನ ಬಿಡುಗಡೆ ಸೇರಿದಂತೆ ಜಮ್ಮುವಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಅವರು ಇಂದು ಅಲ್ಲಿಂದಲೇ ಚಾಲನೆ ನೀಡಿದ್ದಾರೆ. ನಾನು ಮತ್ತು ಸಂಸದೆ ಮಂಗಳಾ ಅಂಗಡಿ ಅವರು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ” ಎಂದು ತಿಳಿಸಿದರು.